ನವದೆಹಲಿ: 16 ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದೆ. ನಿನ್ನೆ ಐಪಿಎಲ್ನ ವೇಳಾ ಪಟ್ಟಿಯನ್ನು ಬಿಡುಗಡೆಯಾಗಿದ್ದು, ಮಾರ್ಚ್ 31 ರಿಂದ ಪಂದ್ಯಗಳು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 15ನೇ ಆವೃತ್ತಿಯ ವಿಜೇತ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿದೆ. ಐಪಿಎಲ್ ವೇಳಾ ಪಟ್ಟಿ ಘೋಷಣೆ ಆದ ಬೆನ್ನಲ್ಲೆ ರಾಜಸ್ಥಾನ ರಾಯಲ್ಸ್ಗೆ ಹಿನ್ನೆಡೆಯಾಗಿದ್ದು, ಕರ್ನಾಟಕದ ಬೌಲರ್ ಪ್ರಸಿದ್ಧ ಕೃಷ್ಣ ಅವರು 16ನೇ ಸೀಸನ್ನಿಂದ ಹೊರಗುಳಿದಿದ್ದಾರೆ.
ರಾಜಸ್ಥಾನ ರಾಯಲ್ಸ್ನ ಟ್ರಂಪ್ ಕಾರ್ಡ್ ಬೌಲರ್ ಪ್ರಸಿದ್ಧ ಕೃಷ್ಣ 2023ರ ಐಪಿಎಲ್ ಸೀಸನ್ನಿಂದ ಹೊರಗುಳಿದಿದ್ದಾರೆ. ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಕೃಷ್ಣ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿ ಮಾಡುತ್ತಿದ್ದಾರೆ.
ಕರ್ನಾಟಕದ 27 ವರ್ಷದ ಪ್ರಸಿದ್ಧ ಕೃಷ್ಣ ಅವರನ್ನು ರಾಜಸ್ಥಾನ್ ರಾಯಲ್ಸ್ 10 ಕೋಟಿ ಕೊಟ್ಟು ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ 17 ಪಂದ್ಯಗಳನ್ನು ಆಡಿ 19 ವಿಕೆಟ್ ಪಡೆದಿದ್ದಾರೆ. ಆಗಸ್ಟ್‌ನಲ್ಲಿ ಜಿಂಬಾಬ್ವೆ ಪ್ರವಾಸದ ನಂತರ ಪ್ರಸಿದ್ಧ ಕೃಷ್ಣ ಅವರು ಕ್ರಿಕೆಟ್ ಆಡಿಲ್ಲ. ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಕೂಡ ಅವರಿಗೆ ಕಷ್ಟ ಎಂದು ಹೇಳಲಾಗುತ್ತಿದೆ. ಅಲ್ಲದೇ ರಣಜಿ ಟ್ರೋಫಿ ಪಂದ್ಯದಲ್ಲೂ ಕೃಷ್ಣ ಆಡಿಲ್ಲ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್ ಮುನ್ನಡೆಸುತ್ತಿದ್ದಾರೆ. ರಾಯಲ್ಸ್ 2008 ರಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ರಾಜಸ್ಥಾನ ರಾಯಲ್ಸ್ಗೆ ಜೈಪುರದ ಸ್ವೈ ಮಾನ್ ಸಿಂಗ್ ಸ್ಟೇಡಿಯಂ ತವರು ಮೈದಾನ ಆಗಿದೆ. ತಂಡದಲ್ಲಿ ಶೇನ್ ವ್ಯಾಟ್ಸನ್, ಅಜಿಂಕ್ಯ ರಹಾನೆ ಮತ್ತು ಜೋಸ್ ಬಟ್ಲರ್ ಮುಂತಾದ ಬಲಿಷ್ಠ ಆಟಗಾರರಿದ್ದಾರೆ. ಪ್ರಸಿದ್ಧ ಕೃಷ್ಣ ಹೊರಗುಳಿದಿರುವುದರಿಂದ ಆರ್ಆರ್ ವಿದೇಶಿ ಬೌಲರ್ಗಳಾದ ಟ್ರೆಂಟ್ ಬೌಲ್ಟ್ ಮತ್ತು ಜೇಸನ್ ಹೋಲ್ಡರ್ ಮೇಲೆ ಹೆಚ್ಚು ಒತ್ತುಕೊಡಬೇಕಾಗಿದೆ.