ಮುಂಬೈ:ಯಾರ್ಕರ್ ಸ್ಪೆಷಲಿಸ್ಟ್, ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಲಿಂಗ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮರುಪ್ರವೇಶ ಕೊಟ್ಟಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಅವರು ಸೇರ್ಪಡೆಯಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಲಿಂಗ ರಾಜಸ್ಥಾನ ತಂಡ ಸೇರಿಕೊಳ್ಳಲಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಫ್ರಾಂಚೈಸಿ ಅಧಿಕೃತ ಮಾಹಿತಿ ತಿಳಿಸಿದೆ. ಈಗಾಗಲೇ ತಂಡದ ನಿರ್ದೇಶಕರಾಗಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಇದ್ದು, ಅವರಿಗೆ ಮಲಿಂಗ ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ:ಮಹಿಳಾ ಕ್ರಿಕೆಟ್ಗೆ ಪ್ರೋತ್ಸಾಹ: 1.5 ಮಿಲಿಯನ್ ಯುರೋ ಹೂಡಿಕೆ ಮುಂದಾದ ಐರ್ಲೆಂಡ್
38 ವರ್ಷದ ಮಲಿಂಗ ಐಪಿಎಲ್‌ನಲ್ಲಿ 122 ಪಂದ್ಯಗಳನ್ನಾಡಿದ್ದು, 170 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ಇವರು, ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಂಡದ ಬೌಲಿಂಗ್ ಸ್ಟ್ರಾಟಜಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಮುಂಬೈ ಇಂಡಿಯನ್ಸ್ ಪರ ಮಲಿಂಗ 122 ಪಂದ್ಯಗಳನ್ನಾಡಿ 170 ವಿಕೆಟ್ ಕಬಳಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾರೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಸಲ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಾಡಲಿವೆ.