ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದ್ದ ಭಾರತ ತಂಡ ಆ್ಯಂಡರ್ಸನ್ ದಾಳಿಗೆ ದಿಢೀರ್ ಕುಸಿತ ಕಂಡಿದೆ. ಆದರೆ ಕನ್ನಡಿಗ ರಾಹುಲ್ ಅರ್ಧಶತಕ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದಾರೆ.
ಮೊದಲ ದಿನ ಇಂಗ್ಲೆಂಡ್ ತಂಡವನ್ನು ಕೇವಲ 183 ರನ್ಗಳಿಗೆ ಕಟ್ಟಿ ಹಾಕಿದ್ದ ಭಾರತ, ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಔಟಾಗದೇ 21 ರನ್ಗಳಿಸಿತ್ತು. ಇಂದು ಎರಡನೇ ದಿನ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ(36) ಮತ್ತು ರಾಹುಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 97ರನ್ ಸೇರಿಸಿದರು.
107 ಎಸೆತಗಳಲ್ಲಿ 6 ಬೌಂಡರಿ ಸಹಿತ 36 ರನ್ಗಳಿಸಿದ್ದ ರೋಹಿತ್ ಶರ್ಮಾರನ್ನು ರಾಬಿನ್ಸನ್ ಔಟ್ ಮಾಡುವ ಮೂಲಕ ಇಂಗ್ಲೆಂಡ್ಗೆ ಬ್ರೇಕ್ ನೀಡಿದರು. ಆದರೆ, ಆರಂಭಿಕ ಜೋಡಿ ಮುರಿದು ಬೀಳುತ್ತಿದ್ದಂತೆ ಭಾರತ ತಂದ ಕೇವಲ 8 ರನ್ಗಳ ಅಂತರದಲ್ಲಿ ಚೇತೇಶ್ವರ್ ಪೂಜಾರ(4) ವಿರಾಟ್ ಕೊಹ್ಲಿ (0) ಮತ್ತು ಅಜಿಂಕ್ಯ ರಹಾನೆ(5) ವಿಕೆಟ್ ಕಳೆದುಕೊಂಡಿತು.