ಮೆಲ್ಬೋರ್ನ್(ಆಸ್ಟ್ರೇಲಿಯಾ):ವಿಶ್ವಕಪ್ಗೆ ಮಳೆ ಪದೇ ಪದೆ ಅಡ್ಡಿಯಾಗುತ್ತಿದೆ. ಈಗಾಗಲೇ ಎರಡೂ ಗುಂಪುಗಳ ತಂಡಗಳ ಮಧ್ಯೆ 4 ಪಂದ್ಯಗಳು ವರುಣಾರ್ಭಟಕ್ಕೆ ಕೊಚ್ಚಿಕೊಂಡು ಹೋಗಿವೆ. ನಿನ್ನೆ ನಡೆಯಬೇಕಿದ್ದ ಅಫ್ಘಾನಿಸ್ತಾನ- ಐರ್ಲೆಂಡ್, ಇಂಗ್ಲೆಂಡ್- ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಗೆ ರದ್ದಗಿದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು.
ಸೆಮಿಫೈನಲ್ ಹಂತಕ್ಕೇರಲು ತಂಡಗಳಿಗೆ ನಿರ್ಣಾಯಕ ಪಂದ್ಯಗಳಾಗಿದ್ದು, ಮಳೆ ಅಡ್ಡಿಯಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಮಳೆ ಆಪೋಷನ ಪಡೆದಿದ್ದಕ್ಕೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೆಲ್ಬರ್ನ್ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯ ಒಂದೂ ಎಸೆತ ಕಾಣದೇ ಪೂರ್ಣ ಪಂದ್ಯವನ್ನೇ ರದ್ದು ಮಾಡಲಾಯಿತು. ಇದು ಇಂಗ್ಲೆಂಡ್ಗೆ ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಲಿದೆ. ಕಳೆದ ಪಂದ್ಯ ಮಳೆ ಕಾರಣಕ್ಕೆ ಡಕ್ವರ್ಥ್ ಲೂಯಿಸ್ ನಿಯಮದಡಿ ಐರ್ಲೆಂಡ್ ಗೆದ್ದುಕೊಂಡಿತು.
ಮಳೆಯ ಆಟಕ್ಕೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ನಿರಾಶೆಗೊಂಡಿದ್ದಾರೆ. ಆದರೆ, ಪಂದ್ಯವನ್ನು ರದ್ದು ಮಾಡುವುದು ಅನಿವಾರ್ಯವಾದ ಕಾರಣ ಅವರು ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ನಾವೆಲ್ಲರೂ ಕ್ರಿಕೆಟ್ ಆಡಲು ಬಯಸುತ್ತೇವೆ. ಆದರೆ, ಸುರಕ್ಷತೆಯೂ ಅಗತ್ಯವಾದ ಕಾರಣ ಪಂದ್ಯ ರದ್ದು ಮಾಡಲಾಗಿದೆ. ಅಂಪೈರ್ಗಳ ತೀರ್ಮಾನವನ್ನು ಒಪ್ಪಿಕೊಳ್ಳುವೆ ಎಂದಿದ್ದಾರೆ.
ಸೆಮಿಫೈನಲ್ ಹಾದಿ ತುಸು ಕಠಿಣವಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಟ್ಲರ್, ಮಳೆಯನ್ನು ತಡೆಯಲು ಸಾಧ್ಯವಿಲ್ಲ. ನಮಗೆ ಇನ್ನೂ 2 ಪಂದ್ಯಗಳಿವೆ. ಅವುಗಳನ್ನು ಜಯಿಸಿ ಸೆಮೀಸ್ಗೆ ತೇರ್ಗಡೆ ಪಡೆಯುತ್ತೇವೆ ಎಂದರು.
ಇಂಗ್ಲೆಂಡ್- ಆಸ್ಟ್ರೇಲಿಯಾ ಪಂದ್ಯದ ಬಳಿಕ ಅದೇ ಮೈದಾನದಲ್ಲಿ ನಡೆಯಬೇಕಿದ್ದ ಐರ್ಲೆಂಡ್- ಆಫ್ಘಾನಿಸ್ತಾನ ಪಂದ್ಯವೂ ಕೂಡ ರದ್ದಾಗಿತ್ತು. ಆಫ್ಘನ್ ಈಗಾಗಲೇ 3 ಪಂದ್ಯಗಳಲ್ಲಿ 2 ಅನ್ನು ಮಳೆ ಕಾರಣಕ್ಕಾಗಿಯೇ ಕಳೆದುಕೊಂಡು 2 ಅಂಕದೊಂದಿಗೆ ಪಟ್ಟಿಯಲ್ಲಿ ಕೊನೆಯಲ್ಲಿದೆ.
ಓದಿ:ಟಿ20 ವಿಶ್ವಕಪ್: ಆಸ್ಟ್ರೇಲಿಯಾ-ಇಂಗ್ಲೆಂಡ್ ಪಂದ್ಯವೂ ಮಳೆಯಿಂದ ರದ್ದು