ಕೊಲಂಬೊ:ಆತಿಥೇಯ ಶ್ರೀಲಂಕಾ ವಿರುದ್ಧದ ನಿಗದಿತ ಓವರ್ಗಳ ಕ್ರಿಕೆಟ್ ಸರಣಿಗಾಗಿ ಈಗಾಗಲೇ ಲಂಕಾದಲ್ಲಿರುವ ಟೀಂ ಇಂಡಿಯಾಗೆ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಗರಡಿಯಲ್ಲಿ ಬೆಳೆದಿರುವ ಅನೇಕ ಯಂಗ್ ಪ್ಲೇಯರ್ಸ್ ಇದೀಗ ಲಂಕಾ ಪ್ರವಾಸದಲ್ಲಿದ್ದು, ಸದ್ಯ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅದ್ಭುತವಾಗಿರುತ್ತದೆ. ಅವರಿಗೆ ಕ್ರಿಕೆಟ್ ಬಗ್ಗೆ ಅಪಾರ ಜ್ಞಾನವಿದ್ದು, ಅದನ್ನ ಹಂಚಿಕೊಳ್ಳುವ ರೀತಿ ಕೂಡ ಅತ್ಯುತ್ತಮವಾಗಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ. ರಾಹುಲ್ ಸರ್ ಅಡಿಯಲ್ಲಿ ಕ್ರಿಕೆಟ್ ಆಡುವುದು ನಿಜಕ್ಕೂ ವಿಭಿನ್ನವಾದ ಖುಷಿ ನೀಡುತ್ತದೆ. ಈ ಹಿಂದೆ ಅಂಡರ್-19 ತಂಡದ ಕೋಚ್ ಆಗಿ ಅವರು ನಮಗೆ ಸಲಹೆ ನೀಡಿದ್ದಾರೆ. ಈ ವೇಳೆ ಅನೇಕ ರೀತಿಯ ಅನುಭವ ಹಂಚಿಕೊಂಡಿದ್ದು, ಮೈದಾನದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಲು ಸಹಕಾರಿಯಾಗಲಿದೆ ಎಂದು ಶಾ ಹೇಳಿದ್ದಾರೆ.
ರಾಹುಲ್ ಸರ್ ಡ್ರೆಸ್ಸಿಂಗ್ ರೂಂನಲ್ಲಿದ್ದಾಗ ಎಲ್ಲರೂ ಶಿಸ್ತಿನಿಂದ ಇರುತ್ತಾರೆ. ಅವರೊಂದಿಗಿನ ಪ್ರಾಕ್ಟಿಸ್ ಸೆಷನ್ಗೋಸ್ಕರ ನಾನು ನಿರೀಕ್ಷೆ ಮಾಡ್ತಿದ್ದು, ಅನೇಕ ವಿಷಯಗಳ ಕುರಿತು ಮಾತನಾಡಬೇಕಾಗಿದೆ. ಈ ಪ್ರವಾಸದಲ್ಲಿನ ಅವಕಾಶ ಸದುಪಯೋಗಪಡಿಸಿ ಕೊಳ್ಳಬೇಕಾಗಿದ್ದು, ತಂಡಕ್ಕೆ ಕಮ್ಬ್ಯಾಕ್ ಮಾಡುವ ಇರಾದೆ ಇಟ್ಟುಕೊಂಡಿದ್ದೇನೆ. ಭಾರತ ತಂಡವಾಗಲಿ, ರಣಜಿ ತಂಡವಾಗಲಿ, ಕ್ಲಬ್ ಅಥವಾ ನನ್ನ ಶಾಲಾ ತಂಡವಾಗಲಿ, ಅದು ಯಾವಾಗಲೂ ಅಗ್ರ ಸ್ಥಾನದಲ್ಲಿರಬೇಕು ಎಂಬುದು ನನ್ನ ಹಂಬಲ ಎಂದು ಪೃಥ್ವಿ ಶಾ ಹೇಳಿದ್ದಾರೆ.