ಡರ್ಬನ್ (ದಕ್ಷಿಣ ಆಫ್ರಿಕಾ): ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆರಂಭಿಕ ದಿನಗಳಿಂದ ಇದುವರೆಗೆ ಯಶಸ್ಸನ್ನು ತಂದುಕೊಟ್ಟ ಪ್ರಕ್ರಿಯೆಗಳ ಮೇಲೆ ನಂಬಿಕೆ ಇಟ್ಟು ಅದೇ ರೀತಿ ಮುಂದುವರೆಯುವಂತೆ ಮತ್ತು ಆಟದ ಶೈಲಿಯನ್ನು ಉಳಿಸಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ವಿರುದ್ಧ ಇತ್ತೀಚೆಗೆ ತವರಿನಲ್ಲಿ ನಡೆದ ಐದು ಟಿ20 ಪಂದ್ಯಗಳ ಸರಣಿಯನ್ನು ಭಾರತ 4-1ರಿಂದ ವಶ ಪಡಿಸಿಕೊಂಡಿತ್ತು. ಈ ಸರಣಿಯಲ್ಲಿ ರಿಂಕು ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ತಂಡದ ಫಿನಿಶರ್ ಸ್ಥಾನವನ್ನು ನಿಭಾಯಿಸಿದರು. ಡಿಸೆಂಬರ್ 10, 12 ಮತ್ತು 14 ರಂದು ಡರ್ಬನ್, ಗ್ಕೆಬೆರ್ಹಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಗಳಲ್ಲಿ ಅದೇ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಅಲ್ಲದೇ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯ ವಹಿಸಲಿರುವ 2024ರ ಪುರುಷರ ಟಿ20 ವಿಶ್ವಕಪ್‌ಗಾಗಿ ಭಾರತ ತಯಾರಿಯನ್ನು ಈ ಸರಣಿಯಿಂದ ಕೈಗೊಂಡಿದೆ.
ಬಿಸಿಸಿಐ ಟಿವಿಯಲ್ಲಿ ದಕ್ಷಿಣ ಆಫ್ರಿಕಾದ ಸರಣಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಸಂವಾದದ ಬಗ್ಗೆ ರಿಂಕು ಸಿಂಗ್ ಹಂಚಿಕೊಂಡಿದ್ದಾರೆ. "ಇಲ್ಲಿ ಹವಾಮಾನ ಉತ್ತಮವಾಗಿದೆ, ನಾವು ಇಲ್ಲಿಗೆ ಬಂದ ನಂತರ ವಾಕ್ ಮಾಡಲು ಹೋದೆವು ಮತ್ತು ನಂತರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದೆವು. ಇದೇ ಮೊದಲ ಬಾರಿಗೆ ನಾನು ರಾಹುಲ್ ದ್ರಾವಿಡ್ ಅವರ ಬಳಿ ತರಬೇತಿ ಪಡೆದಿದ್ದೇನೆ ಮತ್ತು ಇದು ಉತ್ತಮ ಅನುಭವವಾಗಿದೆ. ಸದ್ಯ ನಾನು ಏನಾಗಿದ್ದೆನೋ ಅದನ್ನು ಹಾಗೇ ನಿರ್ವಹಿಸುವಂತೆ ಹೇಳಿದರು. ಐದನೇ ಕ್ರಮಾಂಕದಲ್ಲಿ ಆಡುವುದು ಕಷ್ಟ ಎಂದು ದ್ರಾವಿಡ್ ಸರ್ ನನಗೆ ಹೇಳಿದರು, ಹಾಗೇ ಅದೇ ಸ್ಥಾನದಲ್ಲಿ ಇನ್ನಷ್ಟೂ ಉತ್ತಮವಾಗಿದ್ದನ್ನು ಮಾಡಲು ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಡಲು ಹೇಳಿದರು" ಎಂದಿದ್ದಾರೆ.
ಟಿ20 ಮಾದರಿಯಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಒತ್ತಡವನ್ನು ನಿಭಾಯಿಸುವ ಬಗ್ಗೆ ಮಾತನಾಡಿದ ರಿಂಕು ಸಿಂಗ್, "ನಾನು 2013 ರಿಂದ ಯುಪಿ ಪರವಾಗಿ ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದೇನೆ. ಹಾಗಾಗಿ, ನಾನು ಆ ಸ್ಥಾನಕ್ಕೆ ಒಗ್ಗಿಕೊಂಡಿದ್ದೇನೆ. ನಾನು ಆ ಸ್ಥಾನದಲ್ಲಿ ಆಡಲು ಹೆಚ್ಚು ಇಷ್ಟ ಪಡುತ್ತೇನೆ. ಏಕೆಂದರೆ ನಾಲ್ಕೈದು ವಿಕೆಟ್‌ಗಳು ಬಿದ್ದರೆ ಆ ಸ್ಥಾನದಲ್ಲಿ ಆಡುವುದು ತುಂಬಾ ಕಠಿಣವಾಗಿದೆ ಮತ್ತು ನೀವು ಪಾಲುದಾರಿಕೆಯನ್ನು ನಿರ್ಮಿಸಬೇಕು. ಹಾಗಾಗಿ ನಾನು ನನಗೆ ಹೇಳಿಕೊಳ್ಳುತ್ತಲೇ ಇರುತ್ತೇನೆ, ಶಾಂತತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಅದನ್ನು ಮುಂದುವರಿಸಬೇಕು ಎಂದು. ಶಾಂತತೆಯಿಂದ ಇದ್ದರೆ ಟಿ20 ಹೆಚ್ಚು ತ್ವರಿತವಾಗಿ ಆಡಲು ಸಾಧ್ಯವಿದೆ" ಎಂದು ಹೇಳಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ರಿಂಕು ಮೊದಲ ಬಾರಿಗೆ ಕ್ರಿಕೆಟ್ ಆಡುತ್ತಿದ್ದಾರೆ. ಭಾರತಕ್ಕಿಂತ ಭಿನ್ನವಾಗಿರುವ ಇಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದಾಗ ಅವರು ಹೇಳಿದರು, "ಇಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ನಂತರ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚುವರಿ ಬೌನ್ಸ್ ಇದೆ ಎಂದು ಅರಿತೆ. ಭಾರತದಲ್ಲಿ ಇಷ್ಟು ಬೌನ್ಸ್ ಇರುವುದಿಲ್ಲ, ಈ ಬೌನ್ಸ್ಅನ್ನು ಉತ್ತಮವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ" ಎಂದಿದ್ದಾರೆ.
ತಂಡದ ಆಟಗಾರರ ಜೊತೆ ಸಮಯ ಕಳೆಯುವುದು ಮತ್ತು ಇತರರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ಅವರು. "ನಾವು ಐದು-ಆರು ಆಟಗಾರರು ಒಂದು ಗುಂಪಿನಲ್ಲಿದ್ದೇವೆ. ನಾನು, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಅವೇಶ್ ಖಾನ್, ಜಿತೇಶ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ಅವರ ಜೊತೆಗಿರುತ್ತೇನೆ. ಒಟ್ಟಿಗೆ ಇದ್ದಾಗ ಹಾಸ್ಯಗಳನ್ನು ಮಾಡುತ್ತ ಎಂಜಾಯ್ ಮಾಡುತ್ತೇವೆ. ನಾವು ಪರಸ್ಪರರ ಒಡನಾಟವನ್ನು ಆನಂದಿಸುತ್ತೇವೆ, ಇದು ಕ್ರಿಕೆಟ್‌ನಲ್ಲಿ ಬಹಳ ಮುಖ್ಯವಾಗಿದೆ. ನಾನು ಆರಂಭದ ದಿನಗಳಿಂದ ನನ್ನ ಫಿಟ್‌ನೆಸ್ ಮತ್ತು ವೇಗದ ಓಟದ ಬಗ್ಗೆ ಗಮನ ಹರಿಸುತ್ತೇನೆ. ಕ್ರೀಡೆಯಲ್ಲಿ ಬೆಳೆದಂತೆ, ಫಿಟ್‌ನೆಸ್ ಅನ್ನು ನೋಡಿಕೊಳ್ಳುವುದು ಮುಖ್ಯವಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತದ ವಿರುದ್ಧದ ಟಿ 20ಯಿಂದ ಲುಂಗಿ ಎನ್‌ಗಿಡಿ ಹೊರಕ್ಕೆ: ಟೆಸ್ಟ್ಗೆ ಮರಳುವ ಸಾಧ್ಯತೆ