ಮುಂಬೈ: ಕೊಹ್ಲಿ, ರೋಹಿತ್, ಬೂಮ್ರಾ, ಶಮಿ, ರಾಹುಲ್‌ರಂತಹ ಸ್ಟಾರ್ ಆಟಗಾರರು ಇಂಗ್ಲೆಂಡ್ನಲ್ಲಿರುವ ವೇಳೆ ಶ್ರೀಲಂಕಾ ವಿರುದ್ಧ ನಡೆಯುವ ಸೀಮಿತ ಓವರ್ಗಳ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಶ್ರೀಲಂಕಾಕ್ಕೆ ಪ್ರವಾಸ ಬೆಳೆಸುವ ತಂಡಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ತರಬೇತುದಾರರನ್ನಾಗಿ ನೇಮಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐ ಮುಂದೆ ಪ್ರಸ್ತಾಪಿಸಿರುವಂತೆ ಮೊದಲು 3 ಪಂದ್ಯಗಳ ಏಕದಿನ ಸರಣಿ ಮತ್ತು ನಂತರ ಟಿ-20 ಪಂದ್ಯಗಳು ನಡಯಲಿವೆ ಎಂದು ಕ್ರಿಕೆಟ್ ವೆಬ್ಸೈಟ್ ಒಂದು ವರದಿ ಮಾಡಿದೆ. ಮೂರು ಏಕದಿನ ಪಂದ್ಯಗಳು ಜುಲೈ 13, 16, 19ರಂದು ನಡೆಯಲಿವೆ. ನಂತರ 22 ರಿಂದ ಟಿ-20 ಪಂದ್ಯಗಳು ನಡೆಯಲಿವೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ, ಭಾರತ ವೈಟ್ಬಾಲ್ ತಂಡ ಜುಲೈ 5ಕ್ಕೆ ಶ್ರೀಲಂಕಾಗೆ ತೆರಳಲಿದ್ದು, ಜುಲೈ 28ಕ್ಕೆ ತವರಿಗೆ ಮರಳಲಿದೆ. ಶ್ರೀಲಂಕಾದಿಂದ ಮರಳಿದ ನಂತರ 8 ದಿನಗಳ ಕಾಲ 2 ವಿಭಾಗದಲ್ಲಿ ಕ್ವಾರಂಟೈನ್ಗೆ ಒಳಗಾಗಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ರಾಹುಲ್ ದ್ರಾವಿಡ್ ಮತ್ತು ಕೆಲವು ಸಹಾಯಕ ಸಿಬ್ಬಂದಿಯನ್ನು ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಭಾರತ ತಂಡದ ಜೊತೆಗಿರುವಂತೆ ಬಿಸಿಸಿಐ ಕೋರಿದೆ ಎಂಬ ಮಾಹಿತಿ ಮೂಲಗಳಿಂದ ದೊರೆತಿದೆ.
ಅಂದಹಾಗೆ ಭಾರತ ತಂಡಕ್ಕೆ ಈ ಹಿಂದೆ ಮಾರ್ಗದರ್ಶನ ನೀಡಿದ ಅನುಭವ ದ್ರಾವಿಡ್ ಅವರಲ್ಲಿದೆ. ಭಾರತ 'ಎ' ತಂಡದ ಕೋಚ್ ಆಗಿದ್ದ ಸಂದರ್ಭದಲ್ಲಿ ದ್ರಾವಿಡ್ ಬೆಳೆಸಿದ್ದ ಹುಡುಗರು ಇಂದು ಟೀಮ್ ಇಂಡಿಯಾದಲ್ಲಿ ಅಬ್ಬರಿಸುತ್ತಿದ್ದಾರೆ. 2018ರ ಕಿರಿಯರ ವಿಶ್ವಕಪ್‌ನಲ್ಲೂ ದ್ರಾವಿಡ್ ಕೋಚಿಂಗ್ ಅಡಿಯಲ್ಲಿ ಭಾರತ ತಂಡ ಚಾಂಪಿಯನ್ಸ್ ಪಟ್ಟ ಪಡೆದಿತ್ತು. ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿ ಮತ್ತೆ ದ್ರಾವಿಡ್ ಕೋಚಿಂಗ್‌ನ ಅನುಭವ ಭಾರತೀಯ ಆಟಗಾರರಿಗೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸುತ್ತಿದ್ದವ ಈಗ ಬಂಗಾಳದ ಕ್ರೀಡಾ ಸಚಿವ
ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿರುವ ಟೀಂ ಇಂಡಿಯಾದೊಂದಿಗೆ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭಾರತ್ ಅರುಣ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೌರ್ ಕೂಡ ತೆರಳಿದ್ದು, ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿರುವ ಆಟಗಾರರಿಗೆ ಇವರು ಸಲಹೆ ನೀಡಲು ಸಾಧ್ಯವಾಗದ ಕಾರಣ ರಾಹುಲ್ ದ್ರಾವಿಡ್ ಹಾಗೂ ಎನ್ಸಿಸಿ ಸಿಬ್ಬಂದಿಗಳ ಮೊರೆ ಹೋಗಲಾಗಿದೆ ಎನ್ನಲಾಗಿದೆ.
ಲಂಕಾ ಪ್ರವಾಸಕ್ಕೆ ಲಭ್ಯವಿರುವ ಆಟಗಾರರಲ್ಲಿ ಶಿಖರ್ ಧವನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್ ಹೆಸರುಗಳು ಕೇಳಿ ಬಂದಿವೆ. ಆದರೆ ಬಿಸಿಸಿಐ ಇನ್ನೂ ಯಾವುದೇ ತಂಡವನ್ನು ಅಂತಿಮಗೊಳಿಸಿಲ್ಲ.