ಬಾರ್ಬಡೋಸ್ (ವೆಸ್ಟ್ ಇಂಡೀಸ್): ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಇನ್ನು ಕೆಲವೇ ತಿಂಗಳುಗಳಷ್ಟೇ ಬಾಕಿ. ಈ ನಡುವೆ ಟೀಂ ಇಂಡಿಯಾ ಬೆರಳೆಣಿಕೆಯ ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಭಾರತದ ಬಲಿಷ್ಠ ಆಡುವ 11ರ ಬಳಗ ಇನ್ನೂ ನಿರ್ಧಾರವಾಗಿಲ್ಲ. ಆರಂಭಿಕರಿಂದ ಹಿಡಿದು ಬೌಲರ್ಗಳವರೆಗೆ ಪ್ರಯೋಗಗಳು ನಡೆಯುತ್ತಲೇ ಇವೆ. ಕೋಚ್ ರಾಹುಲ್ ದ್ರಾವಿಡ್, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಯುವ ಪಡೆಯನ್ನು ಮೈದಾನಕ್ಕಿಳಿಸಿದ್ದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ.
ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಉಪನಾಯಕ ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಮಾಡಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಭಾರತ ಕಿಶನ್ ಮತ್ತು ಗಿಲ್ರಿಂದ ಉತ್ತಮ ಆರಂಭ ಕಂಡಿತು. ಆದರೆ, ನಂತರ ಸತತ ಬ್ಯಾಟಿಂಗ್ ವೈಫಲ್ಯದಿಂದ 40.5 ಓವರ್ನಲ್ಲಿ 181 ರನ್ಗಳಿಗೆ ಸರ್ವಪತನ ಕಂಡಿತು. ಈ ಗುರಿಯನ್ನು ವೆಸ್ಟ್ ಇಂಡೀಸ್ ತಂಡ ಅತ್ಯಂತ ನಿರಾಯಾಸವಾಗಿ ಬೆನ್ನಟ್ಟಿತು. 6 ವಿಕೆಟ್ಗಳನ್ನು ಉಳಿಸಿಕೊಂಡೇ ತಂಡ ಜಯಭೇರಿ ಭಾರಿಸಿದ್ದಲ್ಲದೇ ಸರಣಿ ಸಮಬಲ ಸಾಧಿಸಿತು.
ಪಂದ್ಯದ ಸೋಲಿನ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಮ್ಯಾನೇಜ್‌ಮೆಂಟ್ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ ಟೀಂ ಇಂಡಿಯಾದಲ್ಲಿ ಮಾಡಿರುವ ಈ ಪ್ರಯೋಗವನ್ನು ರಾಹುಲ್ ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ. ಏಷ್ಯಾ ಕಪ್ ಮತ್ತು ವಿಶ್ವಕಪ್ಗೆ ಮುನ್ನ ತಂಡದಲ್ಲಿ ಪ್ರಯೋಗ ಮಾಡಲು ಈ ಸರಣಿ ಒಂದೇ ಅವಕಾಶ ಎಂದಿದ್ದಾರೆ.