ಚೆನ್ನೈ(ತಮಿಳುನಾಡು):ಔಟ್ ಅಥವಾ ನಾಟೌಟ್ ವಿಚಾರದಲ್ಲಿ ಅನುಮಾನ ಮೂಡಿದಾಗ ತಂಡ ಅಥವಾ ಆಟಗಾರ ಮೈದಾನದ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿ ಮೂರನೇ ಅಂಪೈರ್ಗೆ ಡಿಆರ್‌ಎಸ್ ನಿಯಮದ ಮೂಲಕ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಂದ ಬರುವ ನಿರ್ಣಯ ಅಂತಿಮವಾಗಿರುತ್ತದೆ. ಆದರೆ, ತಮಿಳುನಾಡು ಪ್ರೀಮಿಯರ್ ಲೀಗ್(ಟಿಎನ್ಪಿಎಲ್)ನಲ್ಲಿ ವಿಚಿತ್ರ ವಿದ್ಯಮಾನವೊಂದು ನಡೆದಿದ್ದು, ಡಿಆರ್‌ಎಸ್ ಮೂಲಕ ಥರ್ಡ್ ಅಂಪೈರ್ ನೀಡಿದ ನಿರ್ಣಯವನ್ನು ಮರುಪ್ರಶ್ನಿಸಿ ಭಾರತ ತಂಡದ ಹಿರಿಯ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಮತ್ತೊಂದು ಡಿಆರ್‌ಎಸ್ ಪಡೆದಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಘಟನೆಯಾಗಿದೆ.
ಕೊಯಮತ್ತೂರಿನಲ್ಲಿ ಬುಧವಾರ ರಾತ್ರಿ ನಡೆದ ದಿಂಡಿಗಲ್ ಡ್ರ್ಯಾಗನ್ ಮತ್ತು ತಿರುಚ್ಚಿ ಪಂದ್ಯದಲ್ಲಿ ಈ ವಿಚಿತ್ರ ಘಟಿಸಿತು. ಸ್ಪಿನ್ನರ್ ಆರ್. ಅಶ್ವಿನ್ ಬೌಲಿಂಗ್ನಲ್ಲಿ ದಿಂಡಿಗಲ್ ತಂಡದ ಬ್ಯಾಟರ್ ರಾಜ್‌ಕುಮಾರ್ ಬಲವಾಗಿ ಹೊಡೆಯಲು ಹೋದಾಗ ಚೆಂಡು ಕೀಪರ್ ಕೈಗವಸು ಸೇರಿತು. ಬ್ಯಾಟ್- ಬೌಲ್ ತಾಕಿದ ಸದ್ದು ಕೇಳಿ ಬಂದಂತಾಗಿ ಅಶ್ವಿನ್ ಔಟ್ ಮಾಡಿದ ಸಂಭ್ರಮದಲ್ಲಿದ್ದರು. ಮೈದಾನದ ಅಂಪೈರ್ ಕೂಡ ಔಟ್ ನಿರ್ಣಯ ನೀಡಿದರು.
ಆದರೆ, ತಕ್ಷಣವೇ ಬ್ಯಾಟರ್ ಅಂಪೈರ್ ನಿರ್ಧಾರದ ವಿರುದ್ಧ ಡಿಆರ್‌ಎಸ್ ಪಡೆದು ಮೇಲ್ಮನವಿ ಸಲ್ಲಿಸಿದರು. ಬ್ಯಾಟರ್ ತಕರಾರು ಸ್ವೀಕರಿಸಿದ ಅಂಪೈರ್ ಮೂರನೇ ಅಂಪೈರ್ಗೆ ಸಲ್ಲಿಸಿದರು. ದೃಶ್ಯಾವಳಿಗಳನ್ನು ಪರಿಶೀಲನೆಯ ವೇಳೆ ಚೆಂಡು ಬ್ಯಾಟ್ನ ಅತಿ ಸಮೀಪದಲ್ಲಿ ಸಾಗುತ್ತಿರುವುದು ಕಂಡು ಬಂದಿತು. ಇದೇ ವೇಳೆ ಬ್ಯಾಟ್ ನೆಲಕ್ಕೆ ಬಡಿದಿತ್ತು. ಹೀಗಾಗಿ ಬ್ಯಾಟ್‌ಗೆ ಚೆಂಡು ತಾಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಲಿಲ್ಲ. ಹಲವು ಬಾರಿ ಮರುಪರಿಶೀಲನೆಯ ಬಳಿಕ ಅಂಪೈರ್ ನಾಟೌಟ್ ಎಂದು ಘೋಷಿಸಿದರು.