ನವದೆಹಲಿ:ಐಸಿಸಿ ಶ್ರೇಯಾಂಕ ಪಟ್ಟಿಯನ್ನು ನವೀಕರಿಸಿದ್ದು, ಟೆಸ್ಟ್ಬೌಲಿಂಗ್ ರ್ಯಾಂಕಿಂಗ್ನಲ್ಲಿ ಆರ್ ಅಶ್ವಿನ್ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ಭಾರತ ಬಾರ್ಡರ್ - ಗವಾಸ್ಕರ್ ಟ್ರೋಫಿ ಆಡುತ್ತಿದ್ದು, ಅಶ್ವಿನ್ ಸ್ಪಿನ್ ಟ್ರ್ಯಾಕ್ನಲ್ಲಿ ಅದ್ಭುತ ಕೈಚಳಕ ಪ್ರದರ್ಶಿಸಿದ್ದಾರೆ. ಮೊದಲೆರಡು ಟೆಸ್ಟ್ನಲ್ಲಿ ಐದು ವಿಕೆಟ್ಗಳ ಗುಚ್ಛವನ್ನು ಪಡೆದ ಅಶ್ವಿನ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ನವೀಕೃತ ಪಟ್ಟಿಯಲ್ಲಿ ಅಶ್ವಿನ್ 5 ಅಂಕ ಕಳೆದುಕೊಂಡಿದ್ದು, ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.
ಮಾರ್ಚ್ 1 ರಂದು ನವೀಕರಿಸಲಾಗಿದ್ದ ಪಟ್ಟಿಯಲ್ಲಿ 864 ಅಂಕದಿಂದ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದರು. ಈಗ 5 ಅಂಕ ನಷ್ಟವಾಗಿದ್ದು, 859 ರೇಟಿಂಗ್ ಹೊಂದಿದ್ದಾರೆ. ಆಂಡರ್ಸನ್ ಕೂಡ 859 ಅಂಕ ಹೊಂದಿದ್ದಾರೆ. ಆದರೂ ಜೇಮ್ಸ್ ಆಂಡರ್ಸನ್ ಎರಡನೇ ಸ್ಥಾನದಲ್ಲೇ ಇದ್ದಾರೆ. ಅಶ್ವಿನ್ ನಾಳೆಯಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಆಡಲಿದ್ದಾರೆ. ಇಲ್ಲಿನ ಬೌಲಿಂಗ್ ಅವರ ರ್ಯಾಂಕ್ನ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಜೇಮ್ಸ್ ಆಂಡರ್ಸನ್ ಕೂಡ ನಾಳೆಯಿಂದ ಬಾಂಗ್ಲಾದ ಎದುರು ಟೆಸ್ಟ್ ಆಡುತ್ತಿದ್ದು, ಇಬ್ಬರಿಗೂ ಸಮಾನ ಅಂಕ ಇರುವುದರಿಂದ ಪಂದ್ಯದ ನಂತರ ಯಾರು ಅಗ್ರಸ್ಥಾನ ಅಂಕರಿಸುತ್ತಾರೆ ಎಂಬುದು ಕುತೂಹಲಕರವಾಗಿದೆ.
ಸ್ಪರ್ಧೆಯಿಂದ ಹೊರಗುಳಿದ ಕಮಿನ್ಸ್:ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ನಾಲ್ಕನೇ ಟೆಸ್ಟ್ ಅನ್ನು ಸಹ ಆಡುತ್ತಿಲ್ಲ. ಇದರಿಂದ ಅಗ್ರಸ್ಥಾನದ ಪೈಪೋಟಿಯಿಂದ ಹೊರಗುಳಿದಿದ್ದಾರೆ. ಮಾರ್ಚ್ 1 ರಂದು ನವೀಕರಿಸಲಾಗಿದ್ದ ಪಟ್ಟಿಯಲ್ಲಿ 858 ಅಂಕದಿಂದ ಮೂರನೇ ಸ್ಥಾನದಲ್ಲಿದ್ದರು. ಮೂರನೇ ಟೆಸ್ಟ್ನಲ್ಲಿ ಆಡದಿರುವ ಹಿನ್ನೆಲೆ 9 ಅಂಕಗಳ ಕುಸಿತ ಕಂಡಿದ್ದಾರೆ. ಆದರೆ, ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.