ಮುಂಬೈ :ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ಬುಧವಾರ ಕೋವಿಡ್-19 ಹೋರಾಟಕ್ಕೆ ಕೈ ಜೋಡಿಸಿದೆ.
ಕೋವಿಡ್ ಪೀಡಿತರಿಗೆ ವೈದ್ಯಕೀಯ ಸಂಪನ್ಮೂಲವನ್ನು ಒದಗಿಸುವ ಸಲುವಾಗಿ ರೌಂಡ್ ಟೇಬಲ್ ಇಂಡಿಯಾ ಜೊತೆ ಕೈ ಜೋಡಿಸಿ ದೇಣಿಗೆ ಸಂಗ್ರಹ ನಿಧಿ ಅಭಿಯಾನ ಆರಂಭಿಸಿದೆ.
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಕೋವಿಡ್ ಹೋರಾಟಕ್ಕೆ ವಿವಿಧ ರೀತಿಯಲ್ಲಿ ಕೈಜೋಡಿಸಿವೆ.
ಇದೀಗ ಪಂಜಾಬ್ ಕಿಂಗ್ಸ್ ಕೂಡ ಮುಂದಕ್ಕೆ ಬಂದಿದ್ದು, ಆರ್ಟಿಐ ಜೊತೆಗೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ 70 ಲಕ್ಷ ರೂ. ದೇಣಿಗೆ ನೀಡಿದೆ. ಈ ಸಂಗ್ರಹ ನಿಧಿಯನ್ನು ಕೊರೊನಾ ವೈರಸ್ ಪೀಡಿತರಿಗೆ ವೈದ್ಯಕೀಯ ಸಂಪನ್ಮೂಲಗಳನ್ನು ಒದಗಿಸುವ ಆಶಯವನ್ನು ಹೊಂದಿದೆ.
ಅಂದರೆ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್, ಬೈಪಾಪ್ ಯಂತ್ರಗಳು ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಿಕೊಡುವುದಕ್ಕೆ ಉಪಯೋಗಿಸಿಕೊಳ್ಳಲಾಗುತ್ತದೆ.
ಈ ವೈದ್ಯಕೀಯ ಸಂಪನ್ಮೂಲಗಳನ್ನು ಪ್ರತ್ಯೇಕ ಮನೆಗಳು, ದತ್ತಿ ವೈದ್ಯಕೀಯ ಸಂಸ್ಥೆಗಳು ಮತ್ತು ಇಲ್ಕ್‌ನಂತಹ ಹೆಚ್ಚು ಜನರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಬಳಸಲಾಗುತ್ತದೆ.
ಈ ಹಣದಲ್ಲಿ ಒಂದು ಪೈಸಾ ಕೂಡ ವ್ಯರ್ಥವಾಗದಂತೆ ಬಳಸಿಕೊಳ್ಳುತ್ತೇವೆ ಎಂದು ರೌಂಡ್ ಟೇಬಲ್ ಇಂಡಿಯಾ ಖಚಿತಪಡಿಸಿದೆ. ನಿಮ್ಮೆಲ್ಲರ ದೇಣಿಗೆ ಕಷ್ಟದಲ್ಲಿರುವ , ಅಗತ್ಯವಿರುವವರಿಗೆ ನೆರವಾಗಲಿದೆ ಎಂದು ದೇಣಿಗೆ ನೀಡಲು ಮನವಿ ಮಾಡಿಕೊಂಡಿದೆ.
ಎಸ್ಆರ್ಹೆಚ್ ಮಾಲೀಕ ಸಂಸ್ಥೆಯಾಗಿರುವ ಸನ್ನೆಟ್ವರ್ಕ್ 30 ಕೋಟಿ ರೂ ನೀಡಿದರೆ, ರಾಜಸ್ಥಾನ್ ರಾಯಲ್ಸ್ 7.5 ಕೋಟಿ ನೀಡಿತ್ತು. ಸಿಎಸ್ಕೆ 450 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ದೇಣಿಗೆಯಾಗಿ ತಮಿಳುನಾಡು ಸರ್ಕಾರಕ್ಕೆ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆಗಾಗಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತ್ತು.
ಇದನ್ನು ಓದಿ:ಕೋವಿಡ್ ಹೋರಾಟಕ್ಕೆ 30 ಕೋಟಿ ರೂ ದೇಣಿಗೆ ನೀಡಿದ ಸನ್ರೈಸರ್ಸ್ ಹೈದರಾಬಾದ್