ಹೈದರಾಬಾದ್: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಾಗ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದಲ್ಲಿ ಹೊಸ ಹುದ್ದೆಯೊಂದನ್ನು ಸೃಷ್ಠಿಸಿ ಸಂಜಯ್ ಬಂಗಾರ್ ಅವರನ್ನು ನೇಮಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕೋಚ್ ಆಗಿದ್ದ ಬಂಗಾರ್ ಅವರನ್ನು ಕಿಂಗ್ಸ್ ಈಗ ತಮ್ಮ ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥರಾಗಿ ನೇಮಿಸಿದೆ.
ಪಿಬಿಕೆಎಸ್ ಎಕ್ಸ್ ಖಾತೆಯಲ್ಲಿ, "ಪಂಜಾಬ್ ಕಿಂಗ್ಸ್‌ನ ಕ್ರಿಕೆಟ್ ಅಭಿವೃದ್ಧಿಯ ಹೊಸ ಮುಖ್ಯಸ್ಥರಾಗಿ ಸಂಜಯ್ ಬಂಗಾರ್ ಅವರ ಮರಳುವಿಕೆಯನ್ನು ಘೋಷಿಸಲು ಸಂತೋಷಪಡುತ್ತೇವೆ. ಅವರು ನಮ್ಮ ಸಂಸ್ಥೆಗೆ ಅನುಭವ ಮತ್ತು ಪರಿಣತಿಯ ಸಂಪತ್ತನ್ನು ತರುತ್ತಾರೆ ಮತ್ತು ಅವರ ನಾಯಕತ್ವದಲ್ಲಿ ನಮ್ಮ ಕ್ರಿಕೆಟ್ ಅಭಿವೃದ್ಧಿ ಕಾರ್ಯಕ್ರಮಗಳು ಹೊಸ ಎತ್ತರ ತಲುಪುತ್ತವೆ ಎಂಬ ಭರವಸೆ ಇದೆ" ಎಂದು ಪೋಸ್ಟ್ ಹಂಚಿಕೊಂಡಿದೆ.
ಸಂಜಯ್ ಬಂಗಾರ್ 2014ರಲ್ಲಿ ಸಹಾಯಕ ಕೋಚ್ ಮತ್ತು ಮುಖ್ಯ ಕೋಚ್ ಆಗಿ ಪಂಜಾಬ್ ಕಿಂಗ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಅದೇ ವರ್ಷ ತಂಡ ಫೈನಲ್‌ಗೇರಿದ್ದು, ರನ್ನರ್ ಅಪ್ ಆಗಿತ್ತು.
ಈ ಕುರಿತು ಸಂಜಯ್ ಬಂಗಾರ್ ಪ್ರತ್ರಿಕಿಯಿಸಿದ್ದು, "ಮತ್ತೆ ಪಂಜಾಬ್ ಕಿಂಗ್ಸ್ ಜೊತೆಯಾಗಿರುವುದು ನನ್ನ ಸೌಭಾಗ್ಯ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಈ ವರ್ಷ ನಾವು ಕಡಿಮೆ ಸಂಖ್ಯೆಯ ಆಟಗಾರರನ್ನು ಬಿಡುಗಡೆ ಮಾಡಿದ್ದೇವೆ. ತಂಡವನ್ನು ಬಲಪಡಿಸಲು ಮತ್ತು ಯಶಸ್ಸನ್ನು ತಲುಪಿಸಲು ಐಪಿಎಲ್ ಸಮಯದಲ್ಲಿ ಮತ್ತು ನಂತರ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ" ಎಂದಿದ್ದಾರೆ.