ಭಾರತದ ಸ್ಟಾರ್ ಟೆಸ್ಟ್ ಕ್ರಿಕೆಟರ್ ಚೇತೇಶ್ವರ ಪೂಜಾರ ಅವರು ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ 2023ರಲ್ಲಿ ಸಸೆಕ್ಸ್ ತಂಡದ ನಾಯಕರಾಗಿ ಮಂದಾಳತ್ವ ವಹಿಸಿಕೊಂಡಿದ್ದಾರೆ. ಉತ್ತಮ ಫಾರ್ಮ್ನಲ್ಲಿ ಆಡುತ್ತಿರುವ ಪೂಜಾರ ಅಲ್ಲಿ ಎರಡು ಶತಕ ಗಳಿಸಿದ್ದಾರೆ. ಜೂನ್ 7 ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇಂಗ್ಲೆಂಡ್ನಲ್ಲಿದ್ದು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಆ್ಯಶಸ್ ಸರಣಿಗೆ ಸಿದ್ಧತೆ ಮಾಡಿಕೊಳ್ಳಲು ಆಸಿಸ್ನ ಮಾಜಿ ನಾಯಕ ಸ್ಟೀವ್ ಸ್ಮಿತ್ ಸಹ ಕೌಂಟಿ ಚಾಂಪಿಯನ್‌ಶಿಪ್ ಆಡಲು ತಂಡ ಸೇರಿದ್ದಾರೆ. ಚೇತೇಶ್ವರ ಪೂಜಾರ ಮತ್ತು ಸ್ಮಿತ್ ಒಂದೇ ತಂಡದಲ್ಲಿ ಆಡಲಿದ್ದಾರೆ. ಪೂಜಾರ 3ನೇ ಮತ್ತು ಸ್ಮಿತ್ ನಾಲ್ಕನೇ ಬ್ಯಾಟರ್ ಆಗಿ ಸಸೆಕ್ಸ್ ಪರ ಕಣಕ್ಕಳಿಯುತ್ತಿದ್ದಾರೆ.
ವೋರ್ಸೆಸ್ಟರ್‌ಶೈರ್(ಮೇ 4-7), ಲೀಸೆಸ್ಟರ್‌ಶೈರ್ (ಮೇ 11-14) ಮತ್ತು ಗ್ಲಾಮೊರ್ಗಾನ್ ವಿರುದ್ಧ (ಮೇ 18-21) ಸ್ಮಿತ್ ಸಸೆಕ್ಸ್‌ಗಾಗಿ ಆಡುತ್ತಿದ್ದಾರೆ. ಅವರು ಇಂಗ್ಲೆಂಡ್ ಪಿಚ್ನಲ್ಲಿ ಜೂನ್ ತಿಂಗಳಿನಲ್ಲಿ ಆಸ್ಟ್ರೇಲಿಯಾಕ್ಕಾಗಿ ಮಹತ್ವದ ಪಂದ್ಯಗಳನ್ನು ಆಡಲಿದ್ದಾರೆ. ಜೂನ್ 7 ರಿಂದ 11 ವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಸ್ಶಿಪ್ ನಡೆದರೆ, ಜೂನ್ 16 ರಿಂದ ಜುಲೈ 31 ವರೆಗೆ 5 ಆ್ಯಶಸ್ ಟೆಸ್ಟ್ ಪಂದ್ಯಗಳು ನಡೆಯಲಿವೆ.
ಇದರಿಂದ ಇಬ್ಬರು ಆಟಗಾರರು ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದು, ಈ ಬಗ್ಗೆ ಚೇತೇಶ್ವರ ಪೂಜಾರ ಗ್ಲೌಸೆಸ್ಟರ್‌ಶೈರ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ್ದಾರೆ. "ಹೆಚ್ಚಿನ ಸಮಯ ನಾವು ಪರಸ್ಪರರ ವಿರುದ್ಧ ಆಡಿದ್ದೇವೆ. ಎಂದಿಗೂ ಒಂದೇ ತಂಡದಲ್ಲಿ ಆಡಿಲ್ಲ. ಆದ್ದರಿಂದ ಅವರನ್ನು ಒಂದೇ ತಂಡದಲ್ಲಿ ಹೊಂದಲು ಉತ್ಸುಕನಾಗಿದ್ದೇನೆ. ಅವರಿಂದ ಕಲಿಯಲು ಬಯಸುತ್ತೇನೆ ಮತ್ತು ಅವರನ್ನು ಸಾಧ್ಯವಾದಷ್ಟು ತಿಳಿದುಕೊಳ್ಳಲು ಇಷ್ಟಪಡುತ್ತೇನೆ" ಎಂದು ಹೇಳಿದ್ದಾರೆ.