ಮುಂಬೈ: ಭಾರತ ತಂಡದ ಅನುಭವಿ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಎ ಗ್ರೇಡ್ನಿಂದ ಬಿಗೆ ಹಿಂಬಡ್ತಿ ಪಡೆದಿದ್ದಾರೆ. ಇನ್ನು ಭಾರತ ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎ ಗ್ರೇಡ್ನಿಂದ ಸಿ ಗ್ರೇಡ್ಗೆ ಹಿಂಬಡ್ತಿ ಪಡೆದಿದ್ದಾರೆ.
ಕಳಪೆ ಫಾರ್ಮ್ನಲ್ಲಿರುವ ಕಾರಣಕ್ಕೆ ಈಗಾಗಲೆ ರಹಾನೆ ಮತ್ತು ಪೂಜಾರ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಇದೇ ವಾರದಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ. ಇದೀಗ ಕೇಂದ್ರೀಯ ಗುತ್ತಿಗೆಯಿಂದಲೂ ಹಿಂಬಡ್ತಿಗೆ ಒಳಗಾಗಿದ್ದಾರೆ.
ಇನ್ನು ಭಾರತ ತಂಡದ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ದೂರ ಉಳಿದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎ ಗ್ರೇಡ್ನಿಂದ ಸಿ ಗ್ರೇಡ್ಗೆ ಕುಸಿತ ಕಂಡಿದ್ದಾರೆ. ಅವರು ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬೌಲಿಂಗ್ ಮಾಡದಿರುವುದರಿಂದ ಅವರನ್ನು ಆಯ್ಕೆ ಸಮಿತಿ ತಂಡದಿಂದ ಕೈಬಿಟ್ಟಿದೆ. ಭಾರತ ತಂಡಕ್ಕೆ ಮತ್ತೆ ಮರಳಬೇಕಾದರೆ ಅವರು ಬೌಲಿಂಗ್ನಲ್ಲಿ ಫಿಟ್ನೆಸ್ ಸಾಬೀತುಪಡಿಸಬೇಕೆಂದು ತಿಳಿಸಿದೆ.
ತಂಡದಿಂದ ಹೊರಬಿದ್ದ ನೋವಿನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೂಡ ಬಿ ನಿಂದ ಸಿ ಗ್ರೇಡ್ಗೆ ಹಿಂಬಡ್ತಿ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮಯಾಂಕ್ ಅಗರ್ವಾಲ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಕೂಡ ಬಿ ನಿಂದ ಸಿ ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ.
ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಎ+ ಗ್ರೇಡ್ ಹೊಂದಿರುವ ಆಟಗಾರರು 7 ಕೋಟಿ ರೂ ಪಡೆಯಲಿದ್ದಾರೆ. ಎ,ಬಿ ಮತ್ತು ಸಿ ಗ್ರೇಡ್ನಲ್ಲಿರುವವರು ಕ್ರಮವಾಗಿ 5, 3 ಮತ್ತು 1 ಕೋಟಿ ರೂ ಪಡೆಯಲಿದ್ದಾರೆ. ಕಳೆದ ಬಾರಿ 28 ಆಟಗಾರರು ಗುತ್ತಿಗೆ ಪಡೆದುಕೊಂಡಿದ್ದರು. ಈ ಬಾರಿ 27 ಆಟಗಾರರಿಗೆ ಮಾತ್ರ ಅವಕಾಶ ಸಿಕ್ಕಿದೆ.