ಚಿತ್ತಗಾಂಗ್(ಬಾಂಗ್ಲಾದೇಶ): ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಚೇತೇಶ್ವರ ಪೂಜಾರ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗಿಳಿದ ಭಾರತ 48 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ರಾಹುಲ್ (22) ಹಾಗೂ ಶುಭಮನ್ ಗಿಲ್(20) ಉತ್ತಮ ಆಟದ ಮೂಲಕ ಭರವಸೆಯ ಆರಂಭ ಪಡೆದರೂ 12 ಓವರ್ಗಳಲ್ಲಿ ಇಬ್ಬರೂ ಪೆವಿಲಿಯನ್ ಸೇರಿಕೊಂಡರು. ಈ ನಡುವೆ ವಿರಾಟ್ ಕೊಹ್ಲಿ ಕೂಡ 1 ರನ್ಗೆ ಔಟಾಗುವ ಮೂಲಕ 48 ರನ್ಗೆ 3 ವಿಕೆಟ್ ಕಳೆದುಕೊಂಡ ಭಾರತ ಒತ್ತಡಕ್ಕೆ ಸಿಲುಕಿತ್ತು.
ಈ ಸಂದರ್ಭದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ರಿಷಬ್ ಪಂತ್ ಅಬ್ಬರದ ಆಟ ಪ್ರದರ್ಶಿಸಿ, 45 ಎಸೆತಗಳಲ್ಲಿ 46 ರನ್ ಪೇರಿಸಿದರು. ಹಸನ್ ಮಿರಾಜ್ ಬೌಲಿಂಗ್ನಲ್ಲಿ ತಂಡದ ಮೊತ್ತ 112 ರನ್ ಆಗಿದ್ದಾಗ ಪಂತ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇದಾದ ಬಳಿಕ ಕ್ರೀಸ್‌ನಲ್ಲಿ ಒಂದಾದ ಪೂಜಾರ (90) ಹಾಗೂ ಶ್ರೇಯಸ್ ಅಯ್ಯರ್ (82*) 5ನೇ ವಿಕೆಟ್ಗೆ 149 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದರು.