ಹೈದರಾಬಾದ್(ಡೆಸ್ಕ್): ಪಾಕಿಸ್ತಾನ ಸೂಪರ್ ಲೀಗ್ ಗುಣಮಟ್ಟದಲ್ಲಿ ವಿಶ್ವದ 2ನೇ ಅತ್ಯುತ್ತಮ ಲೀಗ್ ಆಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಬಹುತೇಕ ಹತ್ತಿರವಾಗಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.
ಪ್ರಸ್ತುತ ಪಾಕಿಸ್ತಾನದಲ್ಲಿ ಜನವರಿ 27ರಿಂದ 2022ರ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಇತ್ತೀಚೆಗೆ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಪಾಕಿಸ್ತಾನ ತಂಡದಲ್ಲಿದ್ದ ಎಲ್ಲಾ ಆಟಗಾರರು ಹಾಗೂ ಕೆಲವು ವಿಶ್ವದ ಸ್ಟಾರ್ ಆಟಗಾರರು ಪಿಎಸ್ಎಲ್ನಲ್ಲಿ ಆಡುತ್ತಿದ್ದಾರೆ. ಪ್ರಸ್ತುತ ನಡೆದಿರುವ ಎಲ್ಲಾ ಪಂದ್ಯಗಳು ರೋಚಕವಾಗಿದ್ದು, ಕೊನೆಯ ಓವರ್ನಲ್ಲೇ ಅಂತ್ಯವಾಗಿವೆ.
ಇದನ್ನೂ ಓದಿ:ಆತ 2022ರ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ, ಆರ್ಸಿಬಿಗೆ ಒಳ್ಳೆಯ ನಾಯಕ ಕೂಡ : ಆಕಾಶ್ ಚೋಪ್ರಾ
"ಪಾಕಿಸ್ತಾನ ಸೂಪರ್ ಲೀಗ್ ವಿಶ್ವದ 2ನೇ ಅತ್ಯುತ್ತಮ ಟಿ20 ಲೀಗ್ ಆಗಿದೆ. ಅತ್ಯುತ್ತಮ ಗುಣಮಟ್ಟದ ಕ್ರಿಕೆಟ್ ಆಗಿದ್ದು, ಐಪಿಎಲ್ಗಿಂತ ಹೆಚ್ಚು ಹಿಂದೆ ಉಳಿದಿಲ್ಲ" ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ವಾನ್ ಮಂಗಳವಾರ ಮುಲ್ತಾನ್ ಸುಲ್ತಾನ್ಸ್ ಮತ್ತು ಇಸ್ಲಾಮಾಬಾದ್ ಯುನೈಟೆಡ್ ನಡುವಿನ ಪಂದ್ಯದ ನಂತರ ಈ ಟ್ವೀಟ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ತೋರಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಮುಲ್ತಾನ್ 5 ವಿಕೆಟ್ ಕಳೆದುಕೊಂಡು 217ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಇಸ್ಲಾಮಾಬಾದ್ ತಂಡ 197 ರನ್ಗಳಿಸಿ 20 ರನ್ಗಳ ಸೋಲು ಕಂಡಿತ್ತು. ನಾಯಕ ಸದಾಬ್ ಖಾನ್ 42 ಎಸೆತಗಳಲ್ಲಿ 91 ರನ್ಗಳಿಸಿ ನಡೆಸಿದ ಏಕಾಂಗಿ ಹೋರಾಟ ವ್ಯರ್ಥವಾಗಿತ್ತು.
6 ತಂಡಗಳ ಭಾಗವಹಿಸುವ ಈ ಟೂರ್ನಿಯಲ್ಲಿ 30 ಲೀಗ್ ಹಾಗೂ 4 ನಾಕೌಟ್ ಪಂದ್ಯಗಳು ಜರುಗಲಿವೆ. 2016ರಲ್ಲಿ ಆರಂಭವಾಗಿರುವ ಈ ಲೀಗ್ 7ನೇ ಆವೃತ್ತಿಗೆ ಕಾಲಿಟ್ಟಿದೆ. ಇಸ್ಲಾಮಾಬಾದ್ ಯುನೈಟೆಡ್ 2 ಬಾರಿ, ಪೇಶಾವರ್ ಜಾಲ್ಮಿ , ಕ್ವೆಟ್ಟಾ ಗ್ಲಾಡಿಯೇಟರ್, ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ತಲಾ ಒಂದು ಬಾರಿ ಚಾಂಪಿಯನ್ ಆಗಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ