ಮೆಲ್ಬೋರ್ನ್:ವಿರಾಟ್ ಕೊಹ್ಲಿಯಿಂದ ತೆರವಾಗಿರುವ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಸೀಮಿತ ಓವರ್ಗಳ ನಾಯಕನಾಗಿರುವ ರೋಹಿತ್ ಶರ್ಮಾ ಸೂಕ್ತ ಅಭ್ಯರ್ಥಿ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೇ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಅವರ ಯಶಸ್ಸೇ ಸಾಕ್ಷಿ ಎಂದು ಪಾಂಟಿಂಗ್ ಹೇಳಿದ್ದಾರೆ.
ಕೊಹ್ಲಿ ವಿಶ್ವಕಪ್ ನಂತರ ಟಿ20 ನಾಯಕತ್ವವನ್ನು ತ್ಯಜಿಸಿದರೆ, ಬಿಸಿಸಿಐ ಏಕದಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾರನ್ನು ಒಟ್ಟಾರೆ ಸೀಮಿತ ಓವರ್ಗಳ ತಂಡಕ್ಕೆ ನಾಯಕನನ್ನಾಗಿ ನೇಮಿಸಿತ್ತು. ಇದರ ಬೆನ್ನಲ್ಲೇ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಲ್ಲಿ ಸೋಲುತ್ತಿದ್ದಂತೆ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಇದೀಗ 5 ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ನಾಯಕ ಟೆಸ್ಟ್ ತಂಡದ ಕಪ್ತಾನ ಸ್ಥಾನಕ್ಕೆ ಸೂಕ್ತ ಎಂದು ಮುಂಬೈ ಇಂಡಿಯನ್ಸ್ ಮಾಜಿ ಕೋಚ್ ಕೂಡ ಆಗಿರುವ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
" ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೋಹಿತ್ ಶರ್ಮಾ ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವುದು ಅವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಟೂರ್ನಿಯ ಅತ್ಯಂತ ಯಶಸ್ವಿ ನಾಯಕರಾಗಿರುವ ಅವರು ಹಲವಾರು ಬಾರಿ ಭಾರತ ತಂಡವನ್ನು ಕೂಡ ಮುನ್ನಡೆಸಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟ್ ತಂಡದ ನಾಯಕನಾಗಿ ಕೊಹ್ಲಿ ಸ್ಥಾನವನ್ನು ತುಂಬಲು ರೋಹಿತ್ ಸೂಕ್ತ ಆಟಗಾರ " ಎಂದು ಇಂಗ್ಲೆಂಡ್ ಮಾಜಿ ವೇಗಿ ಇಶಾ ಗುಹಾ ನಡೆಸಿಕೊಡುವ ಐಸಿಸಿ ರಿವ್ಯೂವ್ ಶೋ ಕಾರ್ಯಕ್ರಮದಲ್ಲಿ ಪಾಂಟಿಂಗ್ ಹೇಳಿದ್ದಾರೆ.
" ನಿಮ್ಮ ತಂಡದ ಒಬ್ಬ ಆಟಗಾರ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಆತ ನಾಯಕನಾಗಿದ್ದರೆ ತಂಡಕ್ಕೆ ಹೇಗೆ ನೆರವಾಗಲಿದೆ ಎಂಬುದರ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೇನೆ. ರೋಹಿತ್ ಶರ್ಮಾ ಅತ್ಯುತ್ತಮ ವೈಟ್ ಬಾಲ್ ಆಟಗಾರ ಎಂಬುದು ನಮಗೆ ತಿಳಿದಿದೆ, ಇನ್ನು ಕಳೆದ 2-3 ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ನೀಡಿರುವ ಪ್ರದರ್ಶನವನ್ನು ನೋಡಿದಾಗ ಅವರ ಆಯ್ಕೆಯನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯವಿಲ್ಲ" ಎಂದು 2 ಏಕದಿನ ವಿಶ್ವಕಪ್ ಗೆದ್ದ ನಾಯಕ ಅಭಿಪ್ರಾಯಪಟ್ಟಿದ್ದಾರೆ.