ಲಂಡನ್:ಇಂಗ್ಲೆಂಡ್ನಲ್ಲಿ ನಡೆಯುತ್ತಿದ್ದ ಏಕದಿನ ಮಾದರಿಯ ಕೌಂಟಿ ಕ್ರಿಕೆಟ್ನಲ್ಲಿ ಆಡುತ್ತಿರುವ ಪೃಥ್ವಿ ಶಾ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಭಾವಿ ಇನ್ನಿಂಗ್ಸ್ ಆಡಿದ್ದ ಶಾ, ಮೊಣಕಾಲಿನ ಗಾಯದಿಂದ ಟೂರ್ನಿಯಿಂದ ಹೊರಗುಳಿಯಬೇಕಾಗಿದೆ. ಈ ಬಗ್ಗೆ ನಾರ್ಥಾಂಪ್ಟನ್‌ಶೈರ್ ತನ್ನ ಎಕ್ಸ್ ಆ್ಯಪ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಫಾರ್ಮ್ ಕಳೆದುಕೊಂಡು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದ ಶಾ ಅವರು ಲಂಡನ್ ಕೌಂಟಿಯಲ್ಲಿ ಲಯಕ್ಕೆ ಮರಳಿದ್ದರು. ಆದರೆ ಗಾಯಕ್ಕೆ ತುತ್ತಾಗಿದ್ದು, ಮತ್ತೆ ಸಂಕಷ್ಟ ಎದುರಾಗಿದೆ. ನಾರ್ಥಾಂಪ್ಟನ್‌ಶೈರ್ ಪರ ನಾಲ್ಕು ಇನ್ನಿಂಗ್ಸ್ ಆಡಿರುವ ಪೃಥ್ವಿ ಶಾ ಒಂದು ದ್ವಿಶತಕ ಮತ್ತು ಶತಕ ಗಳಿಸಿದ್ದಾರೆ. ಮುಂಬೈ ಬ್ಯಾಟರ್ ಆರಂಭಿಕರಾಗಿ ಫಾರ್ಮ್ನಲ್ಲಿ ಕಂಡುಬಂದಿದ್ದರು. ಅದ್ಭುತ ಪ್ರದರ್ಶನದಿಂದ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆಯೂ ಇತ್ತು.
ಆಗಸ್ಟ್ 13ರಂದು ನಾರ್ಥಾಂಪ್ಟನ್‌ಶೈರ್ ತಂಡ ಡರ್ಹಾಮ್ ವಿರುದ್ಧ ಪಂದ್ಯವನ್ನಾಡಿತ್ತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಡರ್ಹಾಮ್ 198 ರನ್ ಗಳಿಸಿ ಆಲ್ಔಟ್ ಆಗಿತ್ತು. ಈ ಗುರಿ ಬೆನ್ನತ್ತಿದ್ದ ನಾರ್ಥಾಂಪ್ಟನ್‌ಶೈರ್ 25.4 ಓವರ್ನಲ್ಲೇ ಗೆದ್ದುಕೊಂಡಿತ್ತು. ಪಂದ್ಯದಲ್ಲಿ ಶಾ 76 ಬಾಲ್ನಲ್ಲಿ 15 ಬೌಂಡರಿ ಮತ್ತು 7 ಸಿಕ್ಸ್ನಿಂದ 125 ರನ್ಗಳಿಸಿ ಅಜೇಯರಾಗಿ ಉಳಿದಿದ್ದರು. ಇದೇ ಪಂದ್ಯದಲ್ಲಿ ಮೊದಲು ಫೀಲ್ಡಿಂಗ್ ಮಾಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆದರೆ ಗಾಯವನ್ನೂ ಲೆಕ್ಕಿಸದೆ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿದ್ದಾರೆ.