ಬೆಂಗಳೂರು: ಟೀಂ ಇಂಡಿಯಾದ ಆರಂಭಿಕ ಆಟಗಾರ ಪೃಥ್ವಿ ಶಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋ ಯೋ ಟೆಸ್ಟ್ನಲ್ಲಿ ಅನುತ್ತೀರ್ಣರಾಗಿದ್ದಾರೆ. ಇದರ ಹೊರತಾಗಿಯೂ ಕೂಡ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಲು ಅವರಿಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದು, ಬೆಂಗಳೂರಿನಲ್ಲಿ ಯೋ ಯೋ ಪರೀಕ್ಷೆಗೆ ಹಾಜರಾಗಿದ್ದರು. ಈ ವೇಳೆ ಕ್ರಿಕೆಟಿಗ 15 ಪಾಯಿಂಟ್ಗಳಿಗಿಂತಲೂ ಕಡಿಮೆ ಅಂಕ ಗಳಿಕೆ ಮಾಡಿದ್ದಾರೆ. ಯೋ ಯೋ ಟೆಸ್ಟ್ ಪಾಸ್ ಮಾಡಲು 16.5ಕ್ಕಿಂತಲೂ ಅಧಿಕ ಅಂಕ ಪಡೆದುಕೊಳ್ಳುವುದು ಅವಶ್ಯವಾಗಿದೆ.
ತಾವು ಯೋ ಯೋ ಟೆಸ್ಟ್ನಲ್ಲಿ ಫೇಲ್ ಆಗಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹರಿಬಿಟ್ಟಿದ್ದಾರೆ. 'ನನ್ನ ಪರಿಸ್ಥಿತಿ ಬಗ್ಗೆ ನಿಮಗೆ ತಿಳಿದಿಲ್ಲದಿದ್ದಾಗ ದಯವಿಟ್ಟು ನನ್ನನ್ನು ನಿರ್ಣಯಿಸಬೇಡಿ. ಹಾಗೆ ಮಾಡಿದಲ್ಲಿ ಅದು ನಿಮ್ಮ ಕರ್ಮ' ಎಂದು ಗರಂ ಆಗಿದ್ದಾರೆ.