ಡರ್ಹಾಮ್ (ಲಂಡನ್): ಇಂಗ್ಲೆಂಡ್‌ನ ಕೌಂಟಿ ಏಕದಿನ ಕ್ರಿಕೆಟ್ನಲ್ಲಿ ಮುಂಬೈ ಬ್ಯಾಟರ್ ಪೃಥ್ವಿ ಶಾ ನಾರ್ಥಾಂಪ್ಟನ್‌ಶೈರ್ ಪರ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಫಾರ್ಮ್ನ ಸಮಸ್ಯೆಯಿಂದ ಹೊರಗುಳಿದ ಶಾ ಕೌಂಟಿಯಲ್ಲಿ ಲಯಕ್ಕೆ ಮರಳಿದ್ದಾರೆ. ನಾರ್ಥಾಂಪ್ಟನ್‌ಶೈರ್ ತಂಡಲ್ಲಿ ಒಂದು ದ್ವಿಶತಕ ಮತ್ತು ಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ನಿನ್ನೆ ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ಶಾ ಕೇವಲ 76 ಎಸೆತಗಳಲ್ಲಿ 125 ರನ್ ಸಿಡಿಸಿದರು. ಈ ಇನ್ನಿಂಗ್ಸ್ನಲ್ಲಿ ಪೃಥ್ವಿ 164.47ರ ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದು, 15 ಬೌಂಡರಿ ಮತ್ತು 7 ಸಿಕ್ಸ್ ಬಾರಿಸಿದ್ದಾರೆ. ಜುಲೈ 2021 ರಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಶಾ, 68ನೇ ಎಸೆತದಲ್ಲೇ ಶತಕ ದಾಖಲಿಸಿದರು. ಶಾ ಅವರ ಶತಕದ ನೆರವಿನಿಂದ ಡರ್ಹಾಮ್ ನೀಡಿದ್ದ 199 ಗುರಿಯನ್ನು ನಾರ್ಥಾಂಪ್ಟನ್‌ಶೈರ್ 25.4 ಓವರ್ನಲ್ಲೇ ಜಯಿಸಿತು.
ಈ ಶತಕದೊಂದಿಗೆ ಶಾ ಲಿಸ್ಟ್-ಎ ಕ್ರಿಕೆಟ್ನಲ್ಲಿ 3,000 ರನ್ ಪೂರೈಸಿದ್ದಾರೆ. 57 ಪಂದ್ಯಗಳಲ್ಲಿ ಶಾ 57.66 ರ ಸರಾಸರಿಯಲ್ಲಿ ಮತ್ತು 126.69 ರ ಸ್ಟ್ರೈಕ್ ರೇಟ್‌ನಲ್ಲಿ 3,056 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಮತ್ತು 11 ಅರ್ಧ ಶತಕಗಳನ್ನು ಹೊಂದಿದ್ದಾರೆ. 244ರ ಅತ್ಯುತ್ತಮ ಸ್ಕೋರ್. ಕಳೆದ ಬುಧವಾರ ಸೋಮರ್ಸೆಟ್ ವಿರುದ್ಧ ಆಡಿದ ಪಂದ್ಯದಲ್ಲಿ ಪೃಥ್ವಿ 153 ಬಾಲ್ನಲ್ಲಿ 244 ರನ್ ಗಳಿಸಿದ್ದರು. ಇವರ ಈ ಬೃಹತ್ ಮೊತ್ತದ ಕೊಡುಗೆಯಿಂದ ನಾರ್ಥಾಂಪ್ಟನ್‌ಶೈರ್ 50 ಓವರ್‌ಗಳಲ್ಲಿ 415/8 ರನ್ ಗಳಿಸಿತ್ತು.
2022 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ತಮಿಳುನಾಡಿನ ನಾರಾಯಣ ಜಗದೀಶನ್ ಅವರು 141 ಎಸೆತಗಳಲ್ಲಿ 277 ರನ್ ಗಳಿಸಿದ್ದರು. ಇದು ಲಿಸ್ಟ್-ಎ ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಕೋರ್ ಆಗಿದೆ. ಶಾ ಗಳಿಸಿದ 244 ಲಿಸ್ಟ್-ಎ ಕ್ರಿಕೆಟ್‌ನ ಆರನೇ ಅತಿ ಹೆಚ್ಚು ಸ್ಕೋರ್ ಆಗಿದೆ. ಇದು ಶಾ ಅವರ ಎರಡನೇ ಲಿಸ್ಟ್-ಎ ದ್ವಿಶತಕ ಆಗಿದ್ದು, ದೇಶಿ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ದ್ವಿಶತಕ ಗಳಿಸಿದ ಎರಡನೇ ಬ್ಯಾಟರ್ ಶಾ ಆಗಿದ್ದಾರೆ. ರೋಹಿತ್ ಶರ್ಮಾ ಮೂರು ದ್ವಿಶತಕ ಗಳಿಸಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಶಾ ಗಳಿಸಿದ ದ್ವಿಶತಕ ಇಂಗ್ಲೆಂಡ್‌ನಲ್ಲಿ ಎರಡನೇ ಅತ್ಯುತ್ತಮ ಲಿಸ್ಟ್-ಎ ಸ್ಕೋರ್ ಆಗಿದೆ. ಅಲಿಸ್ಟೈರ್ ಬ್ರೌನ್ ಗ್ಲಾಮೊರ್ಗಾನ್ (2002) ವಿರುದ್ಧ ಸರ್ರೆ ಪರ 268 ರನ್ ಗಳಿಸಿದ್ದರು.
ಇದನ್ನೂ ಓದಿ:Prithvi Shaw: ಕೌಂಟಿ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಮುಂಬೈ ಬ್ಯಾಟರ್ ಪೃಥ್ವಿ ಶಾ