ನವದೆಹಲಿ:ಭಾರತ ತಂಡದ ಹಿರಿಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರು ತಮ್ಮ 100ನೇ ಟೆಸ್ಟ್ ಪಂದ್ಯ ಆಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಚೇತೇಶ್ವರ ಪೂಜಾರ ಅವರು ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಅವರ ವೃತ್ತಿ ಜೀವನದ 100ನೇ ಪಂದ್ಯವಾಗಿರಲಿದೆ.
ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದ 13 ನೇ ಭಾರತೀಯ ಆಟಗಾರರಾಗಲಿದ್ದಾರೆ. 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯ ಆಡಿದ ಆಟಗಾರರಾಗಿದ್ದಾರೆ. ಚೇತೇಶ್ವರ ಪೂಜಾರ ಅವರ ಪತ್ನಿ ಪೂಜಾ ಪಾಬ್ರಿ ಮಂಗಳವಾರ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದು, ಟ್ವಿಟರ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ.
ಬಿಸಿಸಿಐ ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ಚೇತೇಶ್ವರ ಪೂಜಾರ ಮತ್ತು ಅವರ ಪತ್ನಿ ಪೂಜಾ ಪಾವ್ರಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಫೋಟೋವನ್ನು ಟ್ವೀಟ್ ಮಾಡಿದೆ. ಪೂಜಾ ಅವರ ಅಭಿಮಾನಿಗಳು ಈ ಫೋಟೋವನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ 100ನೇ ಟೆಸ್ಟ್ ಪಂದ್ಯಕ್ಕಾಗಿ ಶುಭಾಶಯ ಹೇಳುತ್ತಿದ್ದಾರೆ.
ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಪೂಜಾರ ಅವರನ್ನು ಕರೆಯಲಾಗುತ್ತಿತ್ತು. ಅವರು ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ್ದರು. ಈ ವರೆಗೆ 99 ಟೆಸ್ಟ್ ಪಂದ್ಯದಲ್ಲಿ 169 ಇನ್ನಿಂಗ್ಸ್ ಆಡಿರುವ ಪೂಜಾರ 44.71ರ ಸರಾಸರಿಯಲ್ಲಿ 7,021 ರನ್ ಗಳಿಸಿದ್ದಾರೆ. 206 ರನ್ ಅವರು ಟೆಸ್ಟ್ನಲ್ಲಿ ಗಳಿಸಿದ ಅತೀ ಹೆಚ್ಚು ರನ್ ಆಗಿದೆ. ಇದರಲ್ಲಿ 3 ದ್ವಿಶತಕ, 19 ಶತಕ ಮತ್ತು 35 ಅರ್ಧಶತಕಗಳಿವೆ. ಏಕದಿನದಲ್ಲಿ 5 ಪಂದ್ಯಗಳನ್ನು ಆಡಿರುವ ಪುಜಾರ 51 ರನ್ ಮಾತ್ರ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಚುಕುಟು ಕ್ರಿಕೆಟ್ ಫಾರ್ಮೆಟ್ನಲ್ಲಿ ಪೂಜಾರ ಕಾಣಿಸಿಕೊಂಡಿಲ್ಲ. ಐಪಿಎಲ್ನಲ್ಲಿ ಆಡಿದ್ದು, 30 ಪಂದ್ಯದಲ್ಲಿ 390 ರನ್ ಗಳಿಸಿದ್ದಾರೆ.