ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್):ಕಳೆದ ಎರಡೂವರೆ ವರ್ಷಗಳಿಂದ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ರನ್ ಬರ ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಟಿ -20 ಹಾಗೂ ಏಕದಿನ ಪಂದ್ಯಗಳಲ್ಲಿ ಅವರು ರನ್ ಹೊಳೆ ಹರಿಸುವ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜಾಗದಲ್ಲಿ ಸ್ಥಾನ ಪಡೆದ ದೀಪಕ್ ಹೂಡಾ ಉತ್ತಮ ಪ್ರದರ್ಶನ ನೀಡಿದ್ದು, ಆಯ್ಕೆ ಸಮಿತಿ ಅವರ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಮುಂದಿನ ಕೆಲ ಪಂದ್ಯಗಳಲ್ಲಿ ರನ್ ಮಷಿನ್ ಖ್ಯಾತಿಯ ವಿರಾಟ್ ರನ್ಗಳಿಕೆ ಮಾಡುವಲ್ಲಿ ವಿಫಲವಾದರೆ ವಿಶ್ರಾಂತಿ ಹೆಸರಿನಲ್ಲಿ ಅವರಿಗೆ ಆಯ್ಕೆ ಸಮಿತಿ ಗೇಟ್ ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಕೊಹ್ಲಿ ಸ್ಥಾನಕ್ಕೆ ದೀಪಕ್ ಹೂಡಾ:ಐರ್ಲೆಂಡ್ ವಿರುದ್ಧದ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ದೀಪಕ್ ಹೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಮುಂಬರುವ ಪಂದ್ಯಗಳಲ್ಲಿ ವಿರಾಟ್ ಬ್ಯಾಟಿಂಗ್ನಲ್ಲಿ ಅಬ್ಬರಿಸದಿದ್ದರೆ ಅವರ ಜಾಗಕ್ಕೆ ದೀಪಕ್ ಹೂಡಾ ಆಯ್ಕೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಸಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ -20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಟೀಂ ಇಂಡಿಯಾ ಬೆಸ್ಟ್ ಪ್ಲೇಯಿಂಗ್ XI ಹುಡುಕಾಟದಲ್ಲಿದೆ. ಹೀಗಾಗಿ, ಹೆಚ್ಚಿನ ಪ್ಲೇಯರ್ಸ್ಗೆ ಅವಕಾಶ ನೀಡುತ್ತಿದೆ. ನಿನ್ನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಆಸರೆಯಾಗುವ ಭರವಸೆ ನೀಡಿದ್ದಾರೆ.