ಮುಂಬೈ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ 2ನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಮೊದಲನೇ ಟೆಸ್ಟ್ನಲ್ಲಿ ಭಾರತ ಗೆಲ್ಲುವ ಅವಕಾಶವನ್ನು ಕೂದಲೆಳೆಯಂತರದಿಂದ ಕಳೆದುಕೊಂಡಿತು. ಇದೀಗ ಕಿವೀಸ್ ವಿರುದ್ಧ ಗೆದ್ದು ಮತ್ತೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಮುಂಬೈನ ವಾಂಖೆಡೆಯಲ್ಲಿ ಗೆಲ್ಲುವ ಆಲೋಚನೆಯಲ್ಲಿದೆ.
2ನೇ ಟೆಸ್ಟ್ ಪಂದ್ಯಕ್ಕೆ ಖಾಯಂ ನಾಯಕ ವಿರಾಟ್ ಕೊಹ್ಲಿ ಮರಳಲಿದ್ದಾರೆ. ಹಾಗಾಗಿ ಯಾವ ಆಟಗಾರ ಇಂದಿನ ಪಂದ್ಯದಲ್ಲಿ ಹೊರಗುಳಿಯಲಿದ್ದಾರೆ ಎನ್ನುವುದು ಕುತೂಹಲಕಾರಿ ಅಂಶವಾಗಿದೆ. ಪ್ರಸ್ತುತ ತಂಡದಲ್ಲಿರುವ ಸ್ಟಾರ್ ಬ್ಯಾಟರ್ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ರನ್ಗಳಿಸುವಲ್ಲಿ ವಿಫಲರಾಗುತ್ತಿರುವುದರಿಂದ ನಾಯಕ ಕೊಹ್ಲಿ ಮತ್ತು ಕೋಚ್ ದ್ರಾವಿಡ್ಗೆ ಯಾವ ರೀತಿ ಸಂಯೋಜನೆ ಮಾಡಬೇಕೆಂಬುದು ದೊಡ್ಡ ಸಮಸ್ಯೆಯಾಗಿದೆ.
ಶ್ರೇಯರ್ಗೆ ಕರುಣ್ ನಾಯರ್ ಪರಿಸ್ಥಿತಿ?
ಕಳೆದ ಪಂದ್ಯದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ತಮ್ಮ ಪದಾರ್ಪಣೆ ಪಂದ್ಯದಲ್ಲೇ 105 ಮತ್ತು 65 ರನ್ಗಳಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ತಂಡಕ್ಕೆ ಮರಳಿರುವುದರಿಂದ ಅವರ ಆಯ್ಕೆಯ ಬಗ್ಗೆ ಅನುಮಾನ ಮೂಡುತ್ತಿದೆ. ಈ ಹಿಂದೆ ಕರ್ನಾಟಕದ ಕರುಣ್ ನಾಯರ್ ಕೂಡ ಗಾಯಗೊಂಡ ರಹಾನೆ ಬದಲಿಗೆ ತಂಡಕ್ಕೆ ಸೇರಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ್ದರು.
ಆದರೆ, ರಹಾನೆ ತಂಡಕ್ಕೆ ಮರಳಿದ 11ರ ಬಳಗದಿಂದ ವಂಚಿತರಾದರು. ನಂತರ ತಂಡದಿಂದಲೇ ಮೂಲೆ ಗುಂಪಾದರು. ಇದೀಗ ಶ್ರೇಯಸ್ ಅಯ್ಯರ್ ಪರಿಸ್ಥಿತಿ ಅದೇ ರೀತಿಯಾಗಬಹುದೇ ಎನ್ನುವುದು ಹಲವರ ಪ್ರಶ್ನೆಯಾಗಿದೆ.
ಇನ್ನು ತಂಡದಲ್ಲಿ ಅಜಿಂಕ್ಯ ರಹಾನೆ 2021ರಲ್ಲಿ ಕಳೆದ 12 ಇನ್ನಿಂಗ್ಸ್ಗಳಿಂದ ವೈಫಲ್ಯ ಅನುಭವಿಸಿದ್ದಾರೆ. ಆದರೆ, ಕಳೆದ ಪಂದ್ಯದಲ್ಲಿ ನಾಯಕನಾಗಿದ್ದರಿಂದ ಈ ಪಂದ್ಯದಲ್ಲಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಕಡಿಮೆ. ಆದರೆ, ಹೆಚ್ಚು ಅವಕಾಶಗಳನ್ನು ಕೊಡುತ್ತಿದ್ದಂತೆ ಆಯ್ಕೆ ಸಮಿತಿ ವಿರುದ್ಧ ಟೀಕೆಗಳೂ ಕೂಡ ಎದುರಾಗುತ್ತಿವೆ.
ಇವರಲ್ಲದೆ ಮತ್ತೊಬ್ಬ ಅನುಭವಿ ಚೇತೇಶ್ವರ್ ಪೂಜಾರ ಕೂಡ ವೈಫಲ್ಯ ಅನುಭವಿಸಿರುವುದು ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ. ಆದರೆ, ಇಂಗ್ಲೆಂಡ್ ಪ್ರವಾಸದಲ್ಲಿ ಒಂದೆರಡು ಉತ್ತಮ ಇನ್ನಿಂಗ್ಸ್ ಆಡಿರುವುದರಿಂದ ಮತ್ತೊಂದು ಅವಕಾಶ ಕೊಡುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾಗೆ ಸೀನಿಯರ್ಸ್ ಅನಿವಾರ್ಯ:
ರಹಾನೆ ಮತ್ತು ಪೂಜಾರ ಇಬ್ಬರೂ ವೈಫಲ್ಯ ಅನುಭವಿಸುತ್ತಿದ್ದರೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಈ ಇಬ್ಬರೂ ಅನಿವಾರ್ಯವಾಗಿದ್ದಾರೆ. ಏಕೆಂದರೆ ಕೊಹ್ಲಿ ಹೊರತುಪಡಿಸಿದರೆ ಕುಕಂಬುರಾ ಚೆಂಡಿನಲ್ಲಿ ಆಡಿದ ಅನುಭವ ಇವರಿಬ್ಬರಿಗಿದೆ. ಜೊತೆಗೆ ನಾರ್ಕಿಯಾ ಮತ್ತು ರಬಾಡಾ ಅಂತಹ ಮಾರಕ ವೇಗಿಗಳನ್ನು ಹೊಸ ಆಟಗಾರರೊಂದಿಗೆ ಎದುರಿಸುವುದು ಕಷ್ಟಕರವಾಗಲಿದೆ. ಹಾಗಾಗಿ ನಾಳಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ದೃಷ್ಟಿಯಿಂದ ಈ ಇಬ್ಬರು ಆಟಗಾರರಿಗೆ ಅವಕಾಶ ಕೊಡಲೇ ಬೇಕಾಗಿದೆ.
ಮಯಾಂಕ್ ಅಗರ್ವಾಲ್ ವೈಫಲ್ಯ ಅನುಭವಿಸಿದ್ದು, ಇಂದಿನ ಪಂದ್ಯದಲ್ಲಿ ಆಡುತ್ತಾರೋ ಮತ್ತೊಂದು ಅವಕಾಶ ಪಡೆಯುತ್ತಾರೋ ಎಂಬುದು ಅನುಮಾನವಾಗಿದೆ. ಒಂದು ವೇಳೆ ಇವರನ್ನು ತಂಡದಿಂದ ಕೈಬಿಟ್ಟರೆ ಶುಬ್ಮನ್ ಗಿಲ್ ಜೊತೆಗೆ ಕೆಎಸ್ ಭರತ್ ಅಥವಾ ಪೂಜಾರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಗಾಯಗೊಂಡಿರುವ ಸಹಾ ಕೂಡ ಚೇತರಿಸಿಕೊಂಡಿರುವುದರಿಂದ ಇಂದಿನ ಪಂದ್ಯದಲ್ಲಿ ಯಾರು ಒಳಗುಳಿಯಲಿದ್ದಾರೆ ಎನ್ನುವುದು ಕುತೂಹಲವಾಗಿದೆ.
ಬೌಲಿಂಗ್ ವಿಭಾಗದಲ್ಲಿ ಮೊದಲ ಟೆಸ್ಟ್ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದ ಇಶಾಂತ್ ಶರ್ಮಾ ಬದಲಿಗೆ ಮೊಹಮ್ಮದ್ ಸಿರಾಜ್ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಇತ್ತ ನ್ಯೂಜಿಲ್ಯಾಂಡ್ ಮೊದಲ ಪಂದ್ಯದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ಕೈಬಿಟ್ಟಿದ್ದ ನೀಲ್ ವ್ಯಾಗ್ನರ್ ಅವರನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಆಡಿಸಲಿದೆ. ಇವರಿಗೆ ಬೌಲಿಂಗ್ನಲ್ಲಿ ಪರಿಣಾಮಕಾರಿಯಾಗದ ಸಮರ್ವಿಲ್ ಜಾಗ ಮಾಡಿಕೊಡುವ ಸಾಧ್ಯತೆಯಿದೆ.
ಭಾರತ: ವಿರಾಟ್ ಕೊಹ್ಲಿ (ನಾಯಕ), ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೀ), ಕೆಎಸ್ ಭರತ್ (ವಿಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೀ), ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ವಿಲ್, ಅಜಾ ಸಮರ್ವಿಲ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್