ಮೊಹಾಲಿ:ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದ್ದು, ಪಂದ್ಯವನ್ನು ಗೆದ್ದು ಸ್ಮರಣೀಯವಾಗಿಸಲು ಭಾರತ ತಂಡದ 35ನೇ ಟೆಸ್ಟ್ ತಂಡದ ನಾಯಕ ರೋಹಿತ್ ಪಡೆ ರಣತಂತ್ರಗಳನ್ನು ರೂಪಿಸಿದೆ.
ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಾಳೆಯಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. 1932ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭವಾದಾಗಿನಿಂದ ಭಾರತ ತಂಡದ ಪಯಣವನ್ನು ಅವಲೋಕಿಸಿದರೆ, ಸ್ಟಾರ್‌ಗಳು, ಸೂಪರ್‌ಸ್ಟಾರ್‌ಗಳು ಹಾಗೂ ಮೆಗಾಸ್ಟಾರ್ ಟೀಂ ಇಂಡಿಯಾದಲ್ಲಿ ಪ್ರಜ್ವಲಿಸಿದ್ದಾರೆ. ಈ ನಾಯಕರಿಗೆ ದೇಶದಲ್ಲಿನ ವಿವಿಧ ಕ್ರೀಡಾಂಗಣಗಳಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ.
ಸುನಿಲ್ ಗವಾಸ್ಕರ್ ತಮ್ಮ 10,000 ರನ್ ಗಳಿಸಿದಾಗ, ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ಗೆ ಅತ್ಯಂತ ಭಾವನಾತ್ಮಕ ವಿದಾಯ ಹೇಳಿದಾಗ ವಿಶೇಷ ಗೌರವ ನೀಡಲಾಗಿತ್ತು. ಇದೀಗ ವಿರಾಟ್ ಕೊಹ್ಲಿಯ 100ನೇ ಪಂದ್ಯವನ್ನು ಸ್ಮರಣೀಯವಾಗಿಸುವತ್ತ ಟೀಂ ಇಂಡಿಯಾದ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಭಾರತದಲ್ಲಿ ಹೆಚ್ಚು ಮಂದಿ ಕ್ರಿಕೆಟ್ ಅನ್ನು ಪ್ರೀತಿಸುವಂತೆ ಮಾಡಿದವರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಅವರು ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊಹ್ಲಿ ಮೂರಂಕಿ ದಾಟಿಲ್ಲ. ಹೀಗಾಗಿ ಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಾದ್ರೂ ಶತಕ ಸಿಡಿಸುತ್ತಾರೆಯೇ ಎಂಬ ಅವರ ಅಸಂಖ್ಯಾತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಾಳಿನ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದ್ದು, ಸ್ಟೇಡಿಯಂಗೆ ಕೊಹ್ಲಿ ಅವರ ಅಭಿಮಾನಗಳ ದಂಡೇ ಹರಿದು ಬರುವ ಸಾಧ್ಯತೆ ಇದೆ.