ವಿಶಾಖಪಟ್ಟಣಂ(ಆಂಧ್ರ ಪ್ರದೇಶ): 2024ರ ಟಿ20 ವಿಶ್ವಕಪ್ಗೆ ಇನ್ನೂ 8 ತಿಂಗಳಿದ್ದರೂ ಈಗಾಗಲೇ ಎಲ್ಲಾ ರಾಷ್ಟ್ರೀಯ ತಂಡಗಳು ಸಿದ್ಧತೆ ಆರಂಭಿಸಿವೆ. ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್ ಮುಗಿಯುತ್ತಿದ್ದಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಟಿ20 ಪಂದ್ಯಗಳ ಸರಣಿ ಶುರುವಾಗುತ್ತಿದೆ. ನಾಳೆ ಮೊದಲ ಪಂದ್ಯ ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಅಭಿಮಾನಿಗಳು ಕಾತರರಾಗಿದ್ದಾರೆ.
ಐರ್ಲೆಂಡ್ ವಿರುದ್ಧ ಗೆಲುವು: ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಬಹುತೇಕರು ಏಷ್ಯಾಕಪ್ಗೂ ಮುನ್ನ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಬುಮ್ರಾ ನಾಯಕತ್ವದಲ್ಲಿ ತೆರಳಿದ್ದ ತಂಡ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತ್ತು. (ಒಂದು ಪಂದ್ಯ ಮಳೆಯಿಂದ ರದ್ದಾಗಿದೆ)
ಹೊಸ ತಂಡ ಕಟ್ಟಲು ಬಿಸಿಸಿಐ ಚಿಂತನೆ?: 2007ರ ವಿಶ್ವಕಪ್ಗೆ ಮಾಡಿದ ತಯಾರಿಯ ರೀತಿಯಲ್ಲೇ ಹೊಸ ತಂಡವನ್ನು ಕಟ್ಟಲು ಬಿಸಿಸಿಐ ಚಿಂತಿಸಿದಂತಿದೆ. ಇದಕ್ಕಾಗಿ ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗುತ್ತಿದೆ. ಇನ್ನು 8 ತಿಂಗಳ ಕಾಲಾವಕಾಶವಿದ್ದು ತಂಡದಲ್ಲಿ ಪ್ರಯೋಗಗಳನ್ನು ಮಾಡಿ ಹೊಸ ಟೀಮ್ ಕಟ್ಟುವ ನಿರೀಕ್ಷೆ ಗೋಚರಿಸಿದೆ.
ವಿಶ್ವಕಪ್ ಆಡಿರುವ ಆಟಗಾರರಿಗೆ ವಿಶ್ರಾಂತಿ:ವಿಶ್ವಕಪ್ನಲ್ಲಿ ಅಡಿರುವ ಹೆಚ್ಚಿನ ಆಟಗಾರರಿಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ ಮತ್ತು ಇಶಾನ್ ಕಿಶನ್ ಅವರನ್ನು ಉಳಿಸಿಕೊಳ್ಳಲಾಗಿದೆ. ಶ್ರೇಯಸ್ ಅಯ್ಯರ್ ಕೊನೆಯ ಎರಡು ಪಂದ್ಯಗಳಿಗೆ ಮಾತ್ರ ಲಭ್ಯರಿದ್ದಾರೆ. ಕಿಶನ್ ಮತ್ತು ಸೂರ್ಯ ವಿಶ್ವಕಪ್ನಲ್ಲಿ ಕೆಲವೇ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಪ್ರಸಿದ್ಧ್ ತಂಡದಲ್ಲಿದ್ದರೆಂಬುದು ಬಿಟ್ಟರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಶ್ರೇಯಸ್ ಎಲ್ಲಾ 11 ಪಂದ್ಯಗಳನ್ನೂ ಆಡಿದ್ದಾರೆ.
ಹಾರ್ದಿಕ್ ಅನುಪಸ್ಥಿತಿಯಲ್ಲಿ ಸೂರ್ಯ ಕ್ಯಾಪ್ಟನ್: ವಿಶ್ವಕಪ್ನಲ್ಲಿ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ ಇನ್ನೂ ಚೇತರಿಸಿಕೊಂಡಿರದ ಕಾರಣ ಟಿ20 ನಂ.1 ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ಮೊದಲ ಮೂರು ಪಂದ್ಯಕ್ಕೆ ಗಾಯಕ್ವಾಡ್ ಉಪ ನಾಯಕನಾಗಿ ಸಾಥ್ ಕೊಟ್ಟರೆ, ನಂತರ ಅಯ್ಯರ್ ಈ ಜವಾಬ್ದಾರಿ ವಹಿಸಿಕೊಳ್ಳುವರು.
ಬಲಿಷ್ಠ ಕಾಂಗರೂ ಪಡೆ: ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ನಲ್ಲಿ ಆಡಿರುವ ಪೈಕಿ 6 ಮಂದಿಯನ್ನು ಉಳಿಸಿಕೊಂಡು, 6 ಆಟಗಾರರನ್ನು ಬದಲಿಸಿದೆ. ಆಸೀಸ್ ಕ್ರಿಕೆಟ್ ಸಂಸ್ಥೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಇದೇ ತಂಡ ವಿಶ್ವಕಪ್ಗೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಟಿ20 ಮತ್ತು ಏಕದಿನ ಸರಣಿಗಳನ್ನು ಅಡಿತ್ತು. ಅಲ್ಲಿ ಕಾಂಗರೂ ಪಡೆ ಹರಿಣಗಳನ್ನು ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದರು. ಅದೇ ಪ್ರದರ್ಶನವನ್ನು ಮಾರ್ಷ್ ನಾಯಕತ್ವದಲ್ಲಿ ಮುಂದುವರೆಸಲು ತಂಡ ಸಜ್ಜಾಗಿದೆ.