ಅಹ್ಮದಾಬಾದ್:ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಭಾರತ ತಂಡಕ್ಕೆ ಸೇರಿಕೊಂಡಿರುವುದರಿಂದ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯವನ್ನು ಗೆದ್ದ ಸರಣಿಯನ್ನು ವೈಟ್ವಾಷ್ ಮಾಡಿಕೊಳ್ಳಲು ಭಾರತ ಸಿದ್ಧವಾಗಿದೆ.
ಮೊದಲ ಎರಡು ಪಂದ್ಯಗಳಲ್ಲಿ ಎಲ್ಲ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿ ಸುಲಭವಾಗಿ ಗೆದ್ದ ನಂತರ, ಭಾರತ ತಂಡ ಕೊನೆಯ ಪಂದ್ಯದತ್ತ ಮುಖ ಮಾಡಿದೆ. ಕೋವಿಡ್ 19 ಕಾರಣದಿಂದ ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡಿದ್ದ ಶಿಖರ್ ಧವನ್ ಸೇರಿದಂತೆ ಇತರ ನಾಲ್ಕು ಆಟಗಾರರು ಕೊನೆಯ ಪಂದ್ಯಕ್ಕೆ ಲಭ್ಯರಾಗಲಿದ್ದು, ಕೊನೆಯ ಪಂದ್ಯದಲ್ಲಿ ರೋಹಿತ್ ಅನಿವಾರ್ಯವಾಗಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ.
ಧವನ್ ಅನುಪಸ್ಥಿತಿಯಲ್ಲಿ ಧವನ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿದರೆ, ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ, ಇಬ್ಬರೂ ವೈಫಲ್ಯ ಅನುಭವಿಸಿದ್ದರು. ಎರಡನೇ ಪಂದ್ಯದಲ್ಲಿ ಭಾರತ ತಂಡ 44ರನ್ಗಳ ಜಯ ಸಾಧಿಸಿದ ನಂತರ ರೋಹಿತ್ ಕೊನೆಯ ಪಂದ್ಯಕ್ಕೆ ಧವನ್ ಲಭ್ಯರಿರುತ್ತಾರೆ ಎಂದು ಖಚಿತಪಡಿಸಿದ್ದಾರೆ.
ಧವನ್ ಆರಂಭಿಕನಾಗುವುದು ಖಚಿತವಾಗಿರುವುದರಿಂದ ಉಪನಾಯಕ ಕೆಎಲ್ ರಾಹುಲ್ ತಮ್ಮ 71ನೇ ಶತಕಕ್ಕಾಗಿ ಕಾಯುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಮುಂದುವರಿಯಬೇಕಾಗಿದೆ. ಪಂತ್ ಕೂಡ ಸೂರ್ಯಕುಮಾರ್ ನಂತರದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಧವನ್ ಆಗಮನದಿಂದ ಆಲ್ರೌಂಡರ್ ದೀಪಕ್ ಹೂಡಾ ಕೊನೆಯ ಪಂದ್ಯದಿಂದ ಹೊರಬೀಳಲಿದ್ದಾರೆ.
ಬೆಂಚ್ ಕಾಯುತ್ತಿರುವವರಿಗೆ ಅವಕಾಶ:ಇನ್ನು ವಿಂಡೀಸ್ ತಂಡವನ್ನು 176 ಮತ್ತು 193ಕ್ಕೆ ನಿಯಂತ್ರಿಸುವಲ್ಲಿ ಬೌಲರ್ಗಳು ಸಫಲರಾಗಿದ್ದಾರೆ. ಬೆಂಚ್ ಕಾಯುತ್ತಿರುವ ಕುಲ್ದೀಪ್ ಯಾದವ್,ಯುವ ಬೌಲರ್ ರವಿ ಬಿಷ್ಣೋಯ್ಗೆ ಒಂದು ಅವಕಾಶ ನೀಡಬೇಕೆಂದು ಮ್ಯಾನೇಜ್ಮೆಂಟ್ ಬಯಸಿದರೆ ವಾಷಿಂಗ್ಟನ್ ಸುಂದರ್ ಅಥವಾ ಯುಜ್ವೇಂದ್ರ ಚಹಲ್ ಹೊರಗುಳಿಯಬಹುದು.