ಗೋಲ್ಡ್ ಕೋಸ್ಟ್ :ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗೋಲ್ಡ್ ಕೋಸ್ಟ್ನಲ್ಲಿ ಆರಂಭವಾಗಲಿರುವ ಏಕೈಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಲಿದೆ.
ಭಾರತ ತಂಡ 1-2ರಲ್ಲಿ ಏಕದಿನ ಸರಣಿ ಕಳೆದುಕೊಂಡಿದೆ. ಆದರೆ, ಕೊನೆ ಎರಡು ಏಕದಿನ ಪಂದ್ಯದಲ್ಲಿ ಭಾರತದ ಪ್ರದರ್ಶನ ಅದ್ಭುತವಾಗಿತ್ತು. 2ನೇ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಗೆಲ್ಲುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಸೋಲು ಕಂಡು ಸರಣಿ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿದ್ದರು.
ಭಾನುವಾರ ಕೊನೆಯ ಏಕದಿನ ಪಂದ್ಯದ ನಂತರ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೂ ಮುನ್ನ ಮಿಥಾಲಿ ರಾಜ್ ತಂಡ ಕೇವಲ ಎರಡು ಅಭ್ಯಾಸ ಸೆಷನ್ಗಳನ್ನು ಮಾತ್ರ ನಡೆಸಿದೆ. ಇನ್ನು, ಇದೇ ಮೊದಲ ಡೇ ಅಂಡ್ ನೈಟ್ ಟೆಸ್ಟ್ ಆಗಿರುವುದರಿಂದ ಭಾರತ ತಂಡಕ್ಕೆ ಪಿಂಕ್ಬಾಲ್ನಲ್ಲಿ ಆಡುವ ಯಾವುದೇ ಅನುಭವ ಇಲ್ಲ.
ಆದರೆ, ಆಸ್ಟ್ರೇಲಿಯಾ ತಂಡ 2017ರಲ್ಲಿ ತಮ್ಮ ಏಕೈಕ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಆಡಿದೆ. ಅಭ್ಯಾಸದ ವಿಚಾರದಲ್ಲಿ ಅತಿಥೇಯ ತಂಡಕ್ಕೂ ಹೆಚ್ಚಿನ ಸಮಯ ದೊರೆಕಿಲ್ಲವಾದರೂ ಅವರ ಅಸಾಧಾರಣ ವೇಗದ ದಾಳಿ ಭಾರತಕ್ಕೆ ದೊಡ್ಡ ಸವಾಲಾಗಲಿದೆ.
ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ವರ್ಷಗಳ ನಂತರ ನಡೆದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಡ್ರಾ ಸಾಧಿಸಿತ್ತು. ಆದರೆ, ತಜ್ಞರ ಪ್ರಕಾರ ಪಿಂಕ್ ಬಾಲ್ ಎದುರಿಸುವುದು ಭಾರತೀಯ ಬ್ಯಾಟರ್ಗಳಿಗೆ ತುಂಬಾ ಕಠಿಣವಾಗಲಿದೆ ಎಂದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2006ರಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಎರಡೂ ತಂಡಗಳಲ್ಲಿ ಕೇವಲ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಮಾತ್ರ ಆ ಟೆಸ್ಟ್ ಪಂದ್ಯದ ಭಾಗವಾಗಿದ್ದ ಆಟಗಾರ್ತಿಯರಾಗಿದ್ದಾರೆ.
ಏಕದಿನ ಸರಣಿಯಿಂದ ಗಾಯದ ಕಾರಣ ಹೊರಗುಳಿದಿದ್ದ ಹರ್ಮನ್ ಪ್ರೀತ್ ಕೌರ್ ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಏಕದಿನ ಸರಣಿಯಲ್ಲಿ ಮಿಂಚಿದ್ದ ಎಡಗೈ ಬ್ಯಾಟರ್ ಯಸ್ತಿಕಾ ಭಾಟಿಯಾ ಮತ್ತು ಪೇಸರ್ ಮೇಘನಾ ಸಿಂಗ್ ಟೆಸ್ಟ್ ಕ್ರಿಕೆಟ್ಗೂ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.
ಜೂಲನ್ ಗೋಸ್ವಾಮಿ ಜೊತೆಗೆ ಮೇಘ ಮತ್ತು ಪೂಜಾ ವಸ್ತ್ರಾಕರ್ ವೇಗಿಗಳ ಸಂಯೋಜನೆಯಾಗಬಹುದು. ಸ್ನೇಹ್ ರಾಣಾ ಮತ್ತು ದೀಪ್ತಿ ಶರ್ಮಾ ಸ್ಪಿನ್ ಬೌಲರ್ಗಳ ಪೈಕಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
ಏಕದಿನ ಸರಣಿಯಲ್ಲಿ ಅವಕಾಶವಂಚಿತರಾಗಿದ್ದ ಅನುಭವಿ ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಮತ್ತು ಬ್ಯಾಟರ್ ಪೂನಮ್ ರಾವತ್ ಟೆಸ್ಟ್ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.
ಮತ್ತೊಂದು ಕಡೆ ಆಸ್ಟ್ರೇಲಿಯಾಗೆ ಉಪನಾಯಕಿ ರಚೇಲ್ ಹೇನ್ಸ್ ಗಾಯದ ಕಾರಣ ತಂಡದಿಂದ ಹೊರ ಬಿದ್ದಿರುವುದು ದೊಡ್ಡ ಹೊಡೆತ. ಅವರ ಜಾಗದಲ್ಲಿ ಒಬ್ಬ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಅಥವಾ ಸ್ಪೆಷಲಿಸ್ಟ್ ಬ್ಯಾಟರ್ರನ್ನು ಸೇರಿಸಿಕೊಳ್ಳುವುದಾಗಿ ನಾಯಕಿ ಲ್ಯಾನಿಂಗ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ತಂಡ 74 ಟೆಸ್ಟ್ ಪದ್ಯಗಳನ್ನಾಡಿದ್ದು, ಇದರಲ್ಲಿ 20 ಗೆಲುವು ,10 ಸೋಲು ಮತ್ತು 44 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಭಾರತ 37 ಪಂದ್ಯಗಳನ್ನಾಡಿದ್ದು 5 ಗೆಲುವು, 6 ಸೋಲು ಮತ್ತು 26 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.