ಪೋರ್ಟ್ ಆಫ್ ಸ್ಪೇನ್(ವೆಸ್ಟ್ ಇಂಡೀಸ್):ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದೆ. ಇಂದು ಎರಡನೇ ಪಂದ್ಯಕ್ಕೆ ಅದೇ ಗೆಲುವನ್ನು ಮುಂದುವರೆಸಿ ಸರಣಿ ಗೆಲ್ಲುವ ತವಕದಲ್ಲಿ ಬ್ಲೂ ಬಾಯ್ಸ್ ಇದ್ದಾರೆ. ಆತಿಥೇಯ ವೆಸ್ಟ್ ಇಂಡೀಸ್ ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಗುಡಕೇಶ್ ಮೋಟಿ ಅವರ ಜಾಗಕ್ಕೆ ಹೇಡನ್ ವಾಲ್ಷ್ ಬಂದಿದ್ದಾರೆ. ಭಾರತ ತಂಡದಲ್ಲೂ ಒಂದು ಬದಲಾವಣೆ ಆಗಿದ್ದು ಪ್ರಸಿದ್ಧ್ ಕೃಷ್ಣ ಅವರ ಬದಲಾಗಿ ಆವೇಶ್ ಖಾನ್ ಆಡುತ್ತಿದ್ದಾರೆ.
ತಂಡಗಳು : ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಶಾಯ್ ಹೋಪ್(ವಿಕೆಟ್ ಕೀಪರ್), ಬ್ರ್ಯಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್(ನಾಯಕ), ರೋವ್‌ಮನ್ ಪೊವೆಲ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಹೇಡನ್ ವಾಲ್ಷ್
ಭಾರತ (ಆಡುವ XI): ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಅವರ ಆಕರ್ಷಕ 97 ರನ್ ಮತ್ತು ಗಿಲ್ ಹಾಗೆ ಅಯ್ಯರ್ ಬ್ಯಾಟಿಂಗ್ ಬಲ ಹಾಗೇ ಸಿರಾಜ್, ಥಾಕೂರ್ ಮತ್ತು ಚಹಾಲ್ರ ಬೌಲಿಂಗ್ಗೆ ಆತಿಥೇಯ ವೆಸ್ಟ್ ಇಂಡೀಸ್ ತಂಡ 3 ರನ್ನಿಂದ ಸೋಲನುಭವಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಭಾರತ ಸಾಧಿಸಿದೆ.
ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ 3 ವರ್ಷಗಳ ಬಳಿಕ ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಸಿಡಿಸಿದರು. ಉತ್ತಮವಾಗಿ ಆಡುತ್ತಿದ್ದ ಅವರು 64 ರನ್ ಗಳಿಸಿದ್ದಾಗ ಅನಾವಶ್ಯಕ ರನ್ ಗಳಿಸಲು ಮುಂದಾಗಿ ರನೌಟ್ ಆದರು. ಶಿಖರ್ ಮತ್ತು ಗಿಲ್ರ ಆರಂಭಿಕ ಉತ್ತಮ ಜೊತೆಯಾಟ ತಂಡಕ್ಕೆ ಒಳ್ಳೆಯ ಆರಂಭವನ್ನು ನೀಡಿತ್ತು. 106 ಎಸೆತಗಳಲ್ಲಿ 119ರನ್ಗಳ ಆರಂಭಿಕ ಉತ್ತಮ ಜೊತೆಯಾಟ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಸಹಕರಿಸಿತು. ಶಿಖರ್ ಧವನ್ ಮೂರು ರನ್ ಗಳಿಂದ ತಮ್ಮ 18ನೇ ಶತಕದಿಂದ ವಂಚಿತರಾದರು.
ಗಿಲ್ ನಂತರ ಶ್ರೇಯಸ್ ಅಯ್ಯರ್ ಧವನ್ ಜೊತೆ ಉತ್ತಮ ರನ್ ಕಲೆಹಾಕಿದರು. ಅಯ್ಯರ್ ಅವರು ಸಹ ಅರ್ಧ ಶತಕ ಬಾರಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಆರಂಭಿಕ ಆಟದ ರನ್ ರೇಟ್ನಂತೆ 350 ರನ್ ಗುರಿ ನೀಡುವ ಅಂದಾಜು ಮಾಡಲಾಗಿತ್ತು. ಆದರೆ, ಮಧ್ಯಮ ಕ್ರಮಾಂಕದ ಕುಸಿತದಿಂದ 308 ರನ್ನ ಗಳಿಸಲಷ್ಟೇ ಸಾಧ್ಯವಾಯಿತು.
ಮಧ್ಯಮ ಕ್ರಮಾಂಕದಲ್ಲಿ, ಸೂರ್ಯಕುಮಾರ್ ಯಾದವ್ (13), ಸಂಜು ಸ್ಯಾಮ್ಸನ್(12) ರನ್ ಗಳಿಸಿದರೆ, ದೀಪಕ್ ಹೂಡಾ(27), ಅಕ್ಸರ್ ಪಟೇಲ್(21) ರನ್ ಗಳಿಸಿ ತಂಡ 300 ಗಡಿ ದಾಟುವಂತೆ ಮಾಡಿದರು. ಕೊನೆಯ ಓವರ್ನಲ್ಲಿ ಮೊಹಮ್ಮದ್ ಸಿರಾಜ್ 15 ರನ್‌ಗಳನ್ನು ರಕ್ಷಿಸುವುದರೊಂದಿಗೆ ಭಾರತ ಗೆಲ್ಲುವಲ್ಲಿ ಒಂದು ಪಾತ್ರವನ್ನು ವಹಿಸಿತು.
ಇಂದಿನ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆತಿಥೇಯ ವೆಸ್ಟ್ ಇಂಡೀಸ್ನ್ನು 250ರನ್ ಒಳಗೆ ಕಟ್ಟಿ ಹಾಕಲು ಯೋಜನೆ ಮಾಡಲಾಗಿದೆ. ಈ ಮೂಲಕ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಭಾರತ ತಂಡ ಇದೆ.
ಇದನ್ನೂ ಓದಿ :ಎಬಿಡಿ ಹೊಡಿ ಬಡಿ ಆಟದ ಅದ್ಭುತ ವಿಡಿಯೋ.. ಅಭಿಮಾನಿ ಕೆಲಸಕ್ಕೆ ಸೆಲ್ಯೂಟ್ ಹೊಡೆದ ಮಿ. 360!