ಮೀರ್‌ಪುರ (ಬಾಂಗ್ಲಾದೇಶ): ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಬುಧವಾರ ನಡೆಯಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ ಒಂದು ವಿಕೆಟ್‌ನಿಂದ ರೋಚಕ ಗೆಲುವು ದಾಖಲಿಸಿ ಸರಣಿಯಲ್ಲಿ 1-0ಯ ಅಂತರದ ಮುನ್ನಡೆ ಸಾಧಿಸಿದೆ. ಬಾಂಗ್ಲಾ ಗೆಲುವಿಗೆ 50ಕ್ಕೂ ಹೆಚ್ಚು ರನ್‌ಗಳು ಅಗತ್ಯವಿದ್ದಾಗ ಕೊನೆಯ ವಿಕೆಟ್ ಪಡೆಯುವಲ್ಲಿ ವಿಫಲವಾದ ಟೀಂ ಇಂಡಿಯಾ ಗೆಲುವು ಬಿಟ್ಟು ಕೊಟ್ಟು ಸೋತು ಮುಖಭಂಗ ಅನುಭವಿಸಿತು. ಇದಕ್ಕೂ ಮುನ್ನ, ಭಾರತದ ಸ್ಟಾರ್ ಆಟಗಾರರ ದಂಡು ಕೂಡ ಜವಾಬ್ದಾರಿಯುತ ಆಟ ಪ್ರದರ್ಶಿಸುವಲ್ಲಿ ವಿಫಲವಾಯಿತು.
ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ತೋರಿದ ನಿರಾಶಾದಾಯಕ ಪ್ರದರ್ಶನವೇ ರೋಹಿತ್ ಶರ್ಮಾ ಪಡೆ ಹಿನ್ನಡೆ ಅನುಭವಿಸಲು ಕಾರಣವಾಗಿತ್ತು. 2015ರಲ್ಲಿ ನಡೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ 1-2 ರಿಂದ ಅಂತರದಿಂದ ಸೋಲು ಕಂಡಿತ್ತು. ಕೊನೆಯ ಪಂದ್ಯದಲ್ಲಿ ಮಾತ್ರ ಟೀಂ ಇಂಡಿಯಾ ಗೆದ್ದು ನಿಟ್ಟುಸಿರುಬಿಟ್ಟಿತ್ತು.
ಈ ಸರಣಿಯ ಎರಡನೇ ಪಂದ್ಯದಲ್ಲಿಯೂ ಬಾಂಗ್ಲಾ ಸ್ಪಿನ್ನರ್‌ಗಳಾದ ಶಕೀಬ್ ಅಲ್ ಹಸನ್ ಮತ್ತು ಮೆಹದಿ ಹಸನ್ ಮಿರಾಜ್ ಮತ್ತೊಮ್ಮೆ ಭಾರತೀಯ ಬ್ಯಾಟರ್‌ಗಳನ್ನು 11-40 ಓವರ್‌ಗಳಲ್ಲೇ ಕಟ್ಟಿ ಹಾಕಿದರೆ ಇತಿಹಾಸ ಪುನರಾವರ್ತನೆ ಆಗುವ ಭೀತಿ ಇದೆ. ಅದರಲ್ಲೂ ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ 10 ತಿಂಗಳು ಮಾತ್ರ ಬಾಕಿಯಿದ್ದು ತಂಡ ಎಚ್ಚೆತ್ತುಕೊಳ್ಳಲೇಬೇಕಿದೆ.
ಭಾರತೀಯ ಆಟಗಾರರ ಭಯದ ಆಟದ ಶೈಲಿಯ ಬಗ್ಗೆ ಕೆಲ ದಿನಗಳಿಂದಲೂ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಲೇ ಇದೆ. ಪರಿಸ್ಥಿತಿಗೆ ತಕ್ಕಂತೆ ಆಟ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಈ ಸರಣಿಯಲ್ಲಿ ಶುಭಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರಿಗೂ ವಿಶ್ರಾಂತಿ ನೀಡುವ ಹಿಂದಿನ ಆಯ್ಕೆ ಸಮಿತಿಯ ನಿರ್ಧಾರವೂ ಕೂಡಾ ಟೀಕೆಗೊಳಪಟ್ಟಿದೆ.
ಇದನ್ನೂ ಓದಿ:ನಿಧಾನಗತಿಯ ಓವರ್ ಮಾಡಿದ್ದಕ್ಕೆ ಟೀಂ ಇಂಡಿಯಾಗೆ ಭಾರಿ ದಂಡ ವಿಧಿಸಿದ ಐಸಿಸಿ