ಕಾನ್ಪುರ : ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ನಾಯಕ, ಸ್ಥಿರತೆಯಿಲ್ಲದ ವೇಗದ ಬೌಲರ್ಗಳು ಮತ್ತು ಕೆಲವು ವೈಟ್ ಬಾಲ್ ಕ್ರಿಕೆಟ್ಗೆ ಸೀಮಿತವಾಗಿದ್ದ ಆಟಗಾರರ ಸಂಯೋಜನೆಯನ್ನು ಒಳಗೊಂಡಿರುವ ಅಜಿಂಕ್ಯ ರಹಾನೆ ನೇತೃತ್ವದ ದ್ವಿತೀಯ ದರ್ಜೆಯ ಭಾರತ ತಂಡ ಗುರುವಾರದಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಮತ್ತೊಂದು ಗಬ್ಬಾದಂತಹ ಆಶ್ಚರ್ಯಕರ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ.
ಇಂತಹುದೇ ಯುವ ತಂಡ ಆಸ್ಟ್ರೇಲಿಯಾದಲ್ಲಿ ರೋಹಿತ್, ವಿರಾಟ್ ಕೊಹ್ಲಿ, ಬುಮ್ರಾ ಸೇರಿದಂತೆ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಆಸೀಸ್ ಭದ್ರಕೋಟೆ ಗಬ್ಬಾದಲ್ಲಿ ಜಯ ಸಾಧಿಸಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿತ್ತು. ಇದೀಗ ಮತ್ತೆ ಅಂತಹುದೇ ತಂಡ ನಾಳೆಯಿಂದ ಕಿವೀಸ್ ವಿರುದ್ಧ ಹೋರಾಟ ನಡೆಸಲು ಎದುರು ನೋಡುತ್ತಿದೆ.
ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುವುದು ಕೊನೆಯ ಬಾರಿಯಾಗಬಹುದು. ಒಂದು ವೇಳೆ ಬ್ಯಾಟರ್ ಆಗಿ ಈ ಸರಣಿಯಲ್ಲಿ ವಿಫಲರಾದರೆ ಅವರು ಮತ್ತೆ ವೈಟ್ ಜರ್ಸಿಯಲ್ಲಿ ಕಾಣುವ ಸಾಧ್ಯತೆ ಕಡಿಮೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅನಿವಾರ್ಯವಾಗಿ ಮ್ಯಾನೇಜ್ಮೆಂಟ್ ಇವರನ್ನು ಕೈಬಿಡಬೇಕಾಗಬಹುದು.
ಅನಾನುಭವಿ ಬ್ಯಾಟಿಂಗ್ ಬಳಗ
ದಿಗ್ಗಜರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡದಲ್ಲಿ ಪೂಜಾರಾ, ರಹಾನೆ ಮತ್ತು ಮಯಾಂಕ್ ಮಾತ್ರ 10ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಶುಬ್ಮನ್ ಗಿಲ್ಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಮತ್ತೊಂದು ಅವಕಾಶ ಸಿಕ್ಕಿದೆ.
ಮ್ಯಾನೇಜ್ಮೆಂಟ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಬಯಸಿತ್ತು. ಆದರೆ, ರಾಹುಲ್ ಸರಣಿಯಿಂದ ಹೊರ ಬಿದ್ದಿರುವುದರಿಂದ ಮಯಾಂಕ್ ಅಗರ್ವಾಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಇವರಿಬ್ಬರಿಗೆ ಇತ್ತೀಚಿನ ಇಂಗ್ಲೆಂಡ್ ಸರಣಿಯಲ್ಲಿ ಫಾರ್ಮ್ ಕಂಡುಕೊಂಡಿರುವ ಅನುಭವಿ ಪೂಜಾರಾ ಸಾಥ್ ನೀಡಲಿದ್ದಾರೆ. ಇನ್ನು 4ನೇ ಕ್ರಮಾಂಕದಲ್ಲಿ ಮುಂಬೈ ಸ್ಟಾರ್ ಶ್ರೇಯಸ್ ಅಯ್ಯರ್ ನಂತರ ನಾಯಕ ರಹಾನೆ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ವಿಕೆಟ್ ಕೀಪರ್ ಸಹ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
3 ಸ್ಪಿನ್ನರ್ಗಳ ಸಂಯೋಜನೆ :ಕಾನ್ಪುರ ಸ್ಪಿನ್ಗೆ ನೆರವು ನೀಡುವುದರಿಂದ ಭಾರತ ತಂಡ 3 ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಉಮೇಶ್ ಯಾದವ್ ವೇಗಿಗಳ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದಾರೆ. ಇವರಿಗೆ 100 ಟೆಸ್ಟ್ ಆಡಿರುವ ಇಶಾಂತ್ ಅಥವಾ ಯುವ ಬೌಲರ್ ಸಿರಾಜ್ ಸಾಥ್ ನೀಡುವ ನಿರೀಕ್ಷೆಯಿದೆ.
ನ್ಯೂಜಿಲ್ಯಾಂಡ್ಗೆ ವಿಲಿಯಮ್ಸನ್-ಟೇಲರ್ ಬಲ :ಇತ್ತ ನ್ಯೂಜಿಲ್ಯಾಂಡ್ ಕಡೆ ಟಿ20 ಸರಣಿಯಿಂದ ಹೊರಗುಳಿದಿದ್ದ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಮರಳಲಿದ್ದಾರೆ. ಅಲ್ಲದೆ ಅನುಭವಿಗಳಾದ ರಾಸ್ ಟೇಲರ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್ ಮತ್ತು ಟಾಮ್ ಬ್ಲಂಡೆಲ್ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಇವರ ಜೊತೆಗೆ ನೀಲ್ ವ್ಯಾಗ್ನರ್, ಕೈಲ್ ಜೇಮಿಸನ್ ಹಾಗೂ ಟಿಮ್ ಸೌಥಿಯಂತಹ ಅನುಭವಿ ವೇಗಿಗಳು ಕೂಡ ಅನಾನುಭವಿ ಭಾರತ ತಂಡವನ್ನು ಕಾಡಲು ಸಿದ್ಧರಾಗಿದ್ದಾರೆ.
ಭಾರತದಲ್ಲಿ ವೇಗಿಗಳಿಗಿಂತ ಸ್ಪಿನ್ ಬೌಲರ್ಗಳು ಹೆಚ್ಚಿನ ಪರಿಣಾಮಕಾರಿ ಎಂದು ಅರಿತಿರುವ ಕಿವೀಸ್‌ನ ಅಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್ ಹಾಗೂ ವಿಲಿಯಮ್ ಸಮರ್ವಿಲ್ಲೆ ಅವರನ್ನ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಕಾನ್ಪುರದಲ್ಲಿ ಸ್ಪಿನ್ ಬೌಲಿಂಗ್ ಹೆಚ್ಚು ನೆರವು ನೀಡುವುದರಿಂದ ಮೂವರು ಸ್ಪಿನ್ನರ್ಗಳಿಗೆ ಅವಕಾಶ ನೀಡಿದರು ಅಚ್ಚರಿಯಲ್ಲ.
ಇದೇ ಸ್ಟೇಡಿಯಂನಲ್ಲಿ 2016ರಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಭಾರತ 197 ರನ್ಗಳಿಂದ ಗೆದ್ದು ಬೀಗಿತ್ತು. ರವಿಚಂದ್ರನ್ ಅಶ್ವಿನ್ ಎರಡೂ ಇನ್ನಿಂಗ್ಸ್ಗಳಿಂದ 10 ವಿಕೆಟ್ ಪಡೆದರೆ, ಜಡೇಜಾ 7 ವಿಕೆಟ್ ಪಡೆದು ಮಿಂಚಿದ್ದರು. ಇತ್ತ ನ್ಯೂಜಿಲ್ಯಾಂಡ್ ಪರ ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ಮತ್ತು ಮಾರ್ಕ್ ಕ್ರೈಗ್ ಕಣಕ್ಕಿಳಿದರೂ ಸ್ಯಾಂಟ್ನರ್ ಮಾತ್ರ 5 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು.
ತಂಡಗಳು
ಭಾರತ :ಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಸಿರಾಜ್, ಮೊಹಮ್ಮದ್ ಶರ್ಮಾ, ಜಯಂತ್ ಯಾದವ್, ಶ್ರೀಕಾರ್ ಭರತ್ (2ನೇ ವಿಕೀ), ಪ್ರಸಿದ್ಧ್ ಕೃಷ್ಣ
ನ್ಯೂಜಿಲೆಂಡ್ :ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೀ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೀ), ವಿಲ್ ಯಂಗ್, ಗ್ಲೇನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಕೈಲ್ ಜೇಮಿಸನ್ , ವಿಲಿಯಂ ಸೊಮರ್ವಿಲ್ಲೆ, ಅಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ
ಇದನ್ನು ಓದಿ:'ಕೊಡುಗೆ ಅಂದ್ರೆ, ಪ್ರತಿ ಪಂದ್ಯದಲ್ಲೂ ಶತಕ ಸಿಡಿಸುವುದಲ್ಲ': ಕಳಪೆ ಫಾರ್ಮ್ ಬಗ್ಗೆ ರಹಾನೆ ಹೇಳಿದ್ದಿಷ್ಟು..