ಶಾರ್ಜಾ: 14ನೇ ಆವೃತ್ತಿಯ ಐಪಿಎಲ್ ಬಹಳ ರೋಚಕ ಹಂತಕ್ಕೆ ತಲುಪುತ್ತಿದೆ. ಈಗಾಗಲೆ ಮೂರು ತಂಡಗಳು ಪ್ಲೇ ಆಫ್ ತಲುಪಿವೆ. ಕೊನೆಯ ಸ್ಥಾನಕ್ಕಾಗಿ ರಾಜಸ್ಥಾನ್, ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಸ್ಪರ್ಧೆ ಮಾಡುತ್ತಿವೆ. ಇಂದಿನ ಪಂದ್ಯದಲ್ಲಿ ಮುಂಬೈ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆದ್ದವರು ಪ್ಲೇ ಆಫ್ ರೇಸ್ನಲ್ಲಿ ಉಳಿಯಲಿದ್ದಾರೆ. ಸೋತ ತಂಡದ ನೌಕೌಟ್ ಆಸೆ ಕಮರಲಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲುಗಳೊಂದಿಗೆ 10 ಅಂಕ ಪಡೆದುಕೊಂಡಿವೆ. ಈ ಪಂದ್ಯವನ್ನು ಗೆದ್ದ ತಂಡ 5ನೇ ಸ್ಥಾನಕ್ಕೇರಲಿದೆ. 13 ಪಂದ್ಯಗಳಿಂದ 12 ಅಂಕ ಹೊಂದಿರುವ ಕೆಕೆಆರ್ ಇನ್ನೊಂದು ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.
ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇದೀಗ ಸೋತು ಸುಣ್ಣವಾಗಿರುವ ಮುಂಬೈ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ. ಈಗಾಗಲೆ ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಮತ್ತು ಗ್ಲೇನ್ ಫಿಲಿಪ್ ಕಣಕ್ಕಿಳಿದಿದ್ದರು. ಈ ಇಬ್ಬರ ಜೊತೆ ಶಿವಂ ದುಬೆ ತಂಡಕ್ಕೆ ಸೇರಿರುವುದರಿಂದ ತಂಡದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ.
ಕೆಲ ಬದಲಾವಣೆ ಸಾಧ್ಯತೆ
ಇನ್ನು ಬೌಲರ್ಗಳ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಶಾರ್ಜಾದಲ್ಲಿ ಸ್ಪಿನ್ಗೆ ಹೆಚ್ಚು ನೆರವು ನೀಡುವುದರಿಂದ ಆಕಾಶ್ ಸಿಂಗ್ ಬದಲಿಗೆ ಹೆಚ್ಚುವರಿ ಸ್ಪಿನ್ನರ್ ಆಗಿ ಕನ್ನಡಿಗ ಶ್ರೇಯಸ್ ಗೋಪಾಲ್ಗೆ ಅವಕಾಶ ನೀಡುವ ಸಾಧ್ಯತೆಯಿದೆ.