ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಭಾರತದ ವೇಗದ ಬೌಲಿಂಗ್ ಪಡೆಗೆ ಅನುಭವದ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ, ಯುವ ಬೌಲರ್ಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಹೊಗಳಿದ ಹಿಟ್ಮ್ಯಾನ್, ಪ್ರಸಿದ್ಧ್ ಟೆಸ್ಟ್ ಮಾದರಿಯಲ್ಲಿ ಯಶಸ್ವಿಯಾಗಬಲ್ಲರು ಎಂದಿದ್ದಾರೆ.
ಬುಧವಾರದಿಂದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿರುವ ಭಾರತ ಸರಣಿ ಸಮಬಲ ಸಾಧಿಸಲು ಯತ್ನಿಸಲಿದೆ. ಸೆಂಚುರಿಯನ್ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 32 ರನ್ಗಳ ಸೋಲನುಭವಿಸಿತ್ತು. ಇದರಿಂದ ಹರಿಣಗಳ ನಾಡಿನಲ್ಲಿ ದೀರ್ಘಕಾಲದ ಟೆಸ್ಟ್ ಸರಣಿ ಗೆಲ್ಲುವ ಕನಸು ನನಸಾಗಲಿಲ್ಲ.
ಅನುಭವದ ಕೊರತೆ ಕಂಡಾಗ ಯುವ ಬೌಲರ್ಗಳ ಮೇಲೆ ನಂಬಿಕೆ ಇಡಬೇಕು. ಆಗ ಮಾತ್ರ ಅವರು ಉತ್ತಮ ಪ್ರದರ್ಶನ ಸಾಧ್ಯ ಎಂದು ರೋಹಿತ್ ಹೇಳಿದರು."ಬೌಲಿಂಗ್‌ನಲ್ಲಿ ನಮಗೆ ಸ್ವಲ್ಪ ಅನುಭವದ ಕೊರತೆ ಇದೆ ಎಂದು ನನಗೆ ಅನಿಸುತ್ತದೆ. ಅನನುಭವಿಗಳು ಇದ್ದಾಗ, ಅವರ ಮೇಲೆ ಸ್ವಲ್ಪ ನಂಬಿಕೆ ಮತ್ತು ವಿಶ್ವಾಸ ತೋರಿಸಬೇಕು. ಆಗ ಯಶಸ್ಸು ಸಾಧ್ಯ. ಪ್ರಸಿದ್ಧ್ ವಿಶೇಷವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.