ಪೋರ್ಟ್ ಆಫ್ ಸ್ಪೇನ್:ಹಿರಿಯ ಬೌಲರ್ಗಳ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಯಲ್ಲಿ ತನ್ನದಾಗಿಸಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಆಟಗಾರರು ತೋರಿದ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತಂಡ ಸದ್ಯ ಅತ್ಯುತ್ತಮ ಸ್ಥಿತಿಯಲ್ಲಿದೆ' ಎಂದು ಹೇಳಿದ್ದಾರೆ.
ಹಿರಿಯ ವೇಗಿಗಳಾದ ಮೊಹಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್ ಇರದ ಸರಣಿಯಲ್ಲಿ ಮೊಹಮದ್ ಸಿರಾಜ್ ಅದ್ಭುತ ಪ್ರದರ್ಶನ ನೀಡಿದರು. ವೇಗಿಗಳ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 60 ರನ್‌ಗಳಿಗೆ 5 ವಿಕೆಟ್ ಗಳಿಸಿದರು. ಇದು ತಂಡಕ್ಕೆ ನೆರವು ನೀಡಿದ್ದಲ್ಲದೇ, ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಇದನ್ನವರು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ವೇಗಿಗಳ ನೇತೃತ್ವ ವಹಿಸಲಿದ್ದಾರಾ ಎಂಬ ಪ್ರಶ್ನೆಗೆ, ಒಬ್ಬ ಬೌಲರ್ ಮಾತ್ರ ನೇತೃತ್ವ ವಹಿಸಬಾರದು. ಎಲ್ಲರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಬೇಕು. ಆಗ ಮಾತ್ರ ವಿಭಾಗ ಗಟ್ಟಿಯಾಗಿರಲಿದೆ. ಸಿರಾಜ್ ಇದರಲ್ಲಿ ಯಶಸ್ವಿಯಾಗಿದ್ದಾನೆ ಎಂದು ಭಾವಿಸುತ್ತೇನೆ. ವೇಗಿಗಳು ಪರಿಸ್ಥಿತಿಗೆ ತಕ್ಕಂತೆ ಬೌಲ್ ಮಾಡಿ ತಂಡಕ್ಕೆ ಗೆಲುವು ತಂದುಕೊಡಬೇಕು ಎಂದು ಹೇಳಿದರು.
ಗೆಲುವು ಕಸಿದ ಮಳೆ:ಕೊನೆಯ ದಿನ ಮಳೆ ನಿರಂತರವಾಗಿ ಸುರಿದ ಕಾರಣ ಪಂದ್ಯ ಡ್ರಾ ಆಯಿತು. ಇಲ್ಲವಾದಲ್ಲಿ ಗೆಲುವು ನಮ್ಮದೇ ಆಗಿತ್ತು. ಕೊನೆಯ ದಿನ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ. ಅದನ್ನು ಅರಿತೇ ನಾವು ವಿಂಡೀಸ್ ತಂಡಕ್ಕೆ ದೊಡ್ಡ ಗುರಿ ನೀಡಿದ್ದೆವು. ಆದರೆ, ಎಲ್ಲ ಲೆಕ್ಕಾಚಾರಗಳು ಉಲ್ಟಾ ಆದವು. ಮಳೆಯಾಟದ ಮುಂದೆ ನಮ್ಮ ಆಟ ನಡೆಯಲಿಲ್ಲ ಎಂದು ರೋಹಿತ್ ಬೇಸರಿಸಿದರು.
ಬ್ಯಾಟಿಂಗ್ ಪಡೆಗೂ ಭೇಷ್:ಸದ್ಯ ಬ್ಯಾಟಿಂಗ್ ವಿಭಾಗವೂ ಬಲಿಷ್ಠವಾಗಿದೆ. ನಾನು, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಯಶಸ್ವಿ ಜೈಶ್ವಾಲ್ರಿಂದ ಅದ್ಭುತ ಪ್ರದರ್ಶನ ಮೂಡಿಬಂತು. ನಮಗೆ ಇಶಾನ್‌ರಂತಹ ಆಟಗಾರ ಬೇಕು. ವೇಗವಾಗಿ ರನ್ ಕಲೆಹಾಕುವ ವೇಳೆ ಇಂತಹ ಆಟ ನೆರವಾಗುತ್ತದೆ. ಹೀಗಾಗಿ 2ನೇ ಇನಿಂಗ್ಸ್ನಲ್ಲಿ ಆತನಿಗೆ ಬಡ್ತಿ ನೀಡಿದ್ದೆವು. ತಮ್ಮಲ್ಲಿನ ಶಕ್ತಿ ತೋರಿಸಿದ ಕಿಶನ್ ಸ್ಫೋಟಿಸಿದರು. ಮುಂದೆ ವಿರಾಟ್ ಕೊಹ್ಲಿ ಜಾಗವನ್ನು ತುಂಬುವ ಆಟಗಾರ ಬರಬೇಕಿದೆ. ದಿಗ್ಗಜನ ಸ್ಥಾನ ತುಂಬುವುದು ಅಷ್ಟು ಸುಲಭವಲ್ಲ ಎಂದು ಅಭಿಪ್ರಾಯಪಟ್ಟರು.
2ನೇ ಟೆಸ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಭಾರತ ವಿರಾಟ್ ಕೊಹ್ಲಿ ಶತಕದ ಬಲದಿಂದ 438 ರನ್ ಗಳಿಸಿತ್ತು. ಕೆರೆಬಿಯನ್ನರು 255 ರನ್ ಗಳಿಸಿ, 181 ರನ್ ಹಿನ್ನಡೆ ಅನುಭವಿಸಿದರು. 2ನೇ ಇನಿಂಗ್ಸ್ನಲ್ಲಿ ಭಾರತ 2 ವಿಕೆಟ್ಗೆ 181 ರನ್ ಗಳಿಸಿ ವಿಂಡೀಸ್ಗೆ ಗೆಲುವಿಗಾಗಿ 365 ರನ್ ಗುರಿ ನೀಡಿತ್ತು. ಆದರೆ, ಕೊನೆಯ ಇಡೀ ದಿನ ಮಳೆ ಸುರಿದ ಕಾರಣ ಪಂದ್ಯ ಡ್ರಾ ಆಯಿತು.
ಇದನ್ನೂ ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ