ವಾರಣಾಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಇಂದು (ಶನಿವಾರ) ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, 'ಮಹಾದೇವ' ನಗರದ ಈ ಕ್ರೀಡಾಂಗಣವನ್ನು ಶಿವ ಥೀಮ್ನಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಇದನ್ನು 'ಮಹಾದೇವ'ನಿಗೆ ಸಮರ್ಪಿಸಲಾಗುವುದು ಎಂದರು.
ಕಾಶಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದಿಂದ ಇಲ್ಲಿನ ಕ್ರೀಡಾಪಟುಗಳಿಗೆ ಪ್ರಯೋಜನವಾಗಲಿದೆ. ಈ ಕ್ರೀಡಾಂಗಣವು ಪೂರ್ವಾಂಚಲ್ ಪ್ರದೇಶಕ್ಕೆ ಮುಕುಟವಾಗಲಿದೆ. ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಿದಾಗ ಯುವ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗೇ ಸ್ಥಳೀಯ ಆರ್ಥಿಕತೆಗೆ ಉತ್ತೇಜನವಾಗುತ್ತದೆ ಎಂದರು. ಅಲ್ಲದೇ ಇದೇ ವೇಳೆ ಇಂದಿನಿಂದ ಚೀನಾದಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವ ಆಟಗಾರರಿಗೆ ಪ್ರಧಾನಮಂತ್ರಿ ಶುಭ ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರೀಡಾಂಗಣ ಇದಾಗಿದ್ದು, ಇದರಿಂದ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರೆಯಲಿದೆ. ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಕ್ರಿಕೆಟ್ ಪ್ರೇಮಿಗಳಿಗೆ ಈ ಕ್ರೀಡಾಂಗಣ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಕಪಿಲ್ ದೇವ್, ಕರ್ಸನ್ ಘಾವ್ರಿ, ದಿಲೀಪ್ ವೆಂಗ್‌ಸರ್ಕರ್, ಮದನ್ ಲಾಲ್ ಗುಂಡಪ್ಪ ವಿಶ್ವನಾಥ್, ಗೋಪಾಲ್ ಶರ್ಮಾ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಿದ್ದರು.