ಐಪಿಎಲ್ ಅಂದ್ರೇನೆ ಬೌಂಡರಿ, ಸಿಕ್ಸರ್ಗಳ ರಸದೌತಣ. ಚುಟುಕು ಕ್ರಿಕೆಟ್ನಲ್ಲಿ ಆಟಗಾರ ಅಬ್ಬರಿಸಿದರೆ, ಅಭಿಮಾನಿಗಳ ಕೇಕೆಗೆ ಪಾರವೇ ಇರುವುದಿಲ್ಲ. ಈ ರೀತಿ ಆಡುವ ಭರದಲ್ಲಿ ಸೊನ್ನೆ (ಡಕೌಟ್)ಗೆ ಔಟಾದ ಖ್ಯಾತನಾಮರು ಕಡಿಮೆ ಏನಿಲ್ಲ. ಬಾಲ್ ಅನ್ನು ಬೆಂಡೆತ್ತುವ ಅವಸರದಲ್ಲಿ ತಾನೇ ಔಟಾಗಿ ಪೇಚು ಮೋರೆ ಹಾಕಿಕೊಂಡವರು ಹಲವರು. ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ಸಾರಿ ಸೊನ್ನೆಗೆ ಔಟಾದವರ ಪಟ್ಟಿ ಹೀಗಿದೆ ನೋಡಿ..
ಐಪಿಎಲ್ ಚರಿತ್ರೆಯಲ್ಲಿ ಒಟ್ಟು ಆರು ಮಂದಿ ಆಟಗಾರರು ಅತ್ಯಧಿಕವಾಗಿ ಅಂದರೆ 13 ಬಾರಿ ಡಕೌಟ್ ಆದವರಿದ್ದಾರೆ. ಅವರಲ್ಲಿ ದೂಸ್ರಾ ಸ್ಪೆಷಲಿಸ್ಟ್ ಹರ್ಭಜನ್ ಸಿಂಗ್, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಪಿಯೂಷ್ ಚಾವ್ಲಾ ಮತ್ತು ಟಿ20 ಕ್ರಿಕೆಟ್ಗೆ ಹೆಸರಾದ, ಭಾರತ ತಂಡದ ನಾಯಕ ರೋಹಿತ್ ಶರ್ಮಾ. ಇವರಲ್ಲಿ ಕೆಲವರು ಓಪನರ್ ಆಗಿ ಬಂದು ಔಟ್ ಆದರೆ, ಇನ್ನು ಕೆಲವರು ಕೊನೆಯಲ್ಲಿ ನಾಮ್ ಕೇವಾಸ್ತೇ ಬ್ಯಾಟ್ ಬೀಸಿ ಔಟಾಗಿದ್ದಾರೆ.
ರೋಹಿತ್ ಶರ್ಮಾ:ಡ್ಯಾಶಿಂಗ್ ಓಪನರ್ ಎಂದೇ ಖ್ಯಾತಿಯಾದ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸುವ ರೋಹಿತ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ್ದಾರೆ. ಅಲ್ಲದೇ, 213 ಪಂದ್ಯಗಳಲ್ಲಿ 5611 ರನ್ ಮಾಡಿದ ಸಾಧನೆ ಇವರದು. ಇಂತಹ ದಾಂಡಿಗ ಐಪಿಎಲ್ನಲ್ಲಿಯೇ ಅತ್ಯಧಿಕ ಸಲ ಸೊನ್ನೆ ಸುತ್ತಿದ್ದ ಮೊದಲ ಬ್ಯಾಟರ್ ಆಗಿದ್ದಾರೆ. 13 ಬಾರಿ ಡಕೌಟ್ ಆಗಿ ನಿರಾಸೆ ಉಂಟುಮಾಡಿದ ಕೆಟ್ಟ ದಾಖಲೆ ಇವರ ಹೆಸರಿಗಿದೆ.
ಅಂಬಟಿ ರಾಯುಡು:ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಟಿ ರಾಯುಡು ಕೂಡ 13 ಸಲ ಸೊನ್ನೆ ಸುತ್ತಿದ್ದಾರೆ. 2018 ರಲ್ಲಿ ಚೆನ್ನೈ ತಂಡದ ಪ್ರಮುಖ ಬ್ಯಾಟರ್ ಆಗಿ ಕಾಣಿಸಿಕೊಂಡ ರಾಯುಡು 29.44 ರ ಸರಾಸರಿಯಲ್ಲಿ ಬ್ಯಾಟ್ ಬೀಸಿ ಒಟ್ಟಾರೆ 3916 ರನ್ ಗಳಿಸಿದ್ದಾರೆ. ಆದರೆ, 13 ಬಾರಿಯ ಡಕೌಟ್ ಕಳಪೆ ಸಾಧನೆ ಇವರದಾಗಿದೆ.