ಕೊಲಂಬೊ :ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿಗೆ ಕೋವಿಡ್-19 ಭಾರಿ ಹಿನ್ನಡೆಯನ್ನುಂಟು ಮಾಡುತ್ತಿದೆ. ಈಗಾಗಲೇ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದಿದ್ದ ತಂಡದಲ್ಲಿ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡು ಅವರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಆದರೆ, ಈ ಪ್ರವಾಸದ ಭಾಗವಾಗಿಲ್ಲದೆ ಬಯೋಬಬಲ್ನಲ್ಲಿ ತರಬೇತಿ ನಡೆಸುತ್ತಿದ್ದ ಆಟಗಾರನಿಗೂ ಕೊರೊನಾ ಸೋಂಕು ತಗುಲಿದೆ.
ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಮತ್ತು ಅಂಕಿ-ಅಂಶ ತಜ್ಞ ನಿರೋಶನ್ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದ ನಂತರ ನಡೆಸಿದ ಕೋವಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಪಡೆದಿದ್ದರು. ಹಾಗಾಗಿ, ಅವರ ಜೊತೆಯಲ್ಲಿದ್ದ ಎಲ್ಲಾ ಆಟಗಾರರನ್ನು ಒಂದು ವಾರ ಕ್ವಾರಂಟೈನ್ ಮಾಡಲಾಗಿತ್ತು.
ಇತ್ತ ಭಾರತದ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ 15 ಸದಸ್ಯರ ಬೇರೆ ತಂಡವನ್ನು ಆಯ್ಕೆ ಮಾಡಿ ಬಯೋಬಬಲ್ನಲ್ಲಿರಿಸಿತ್ತು. ಆದರೆ, ಬಯೋಬಬಲ್ನಲ್ಲಿದ್ದ ಸಂದುನ್ ವೀರಕ್ಕೋಡಿ ಎಂಬ ಬ್ಯಾಟ್ಸ್ಮನ್ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಶ್ರೀಲಂಕಾದ Newswire.lk ವರದಿ ಮಾಡಿದೆ.