ಬೆಂಗಳೂರು:ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ತ್ವರಿತ ಅರ್ಧಶತಕಗಳ ನೆರವಿನಿಂದ ಭಾರತ ತಂಡ 2ನೇ ಇನ್ನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು 303 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿದ್ದು, ಶ್ರೀಲಂಕಾ ತಂಡಕ್ಕೆ 447 ರನ್ಗಳ ಅಸಾಧಾರಣ ಗುರಿ ನೀಡಿದೆ.
ಮೊದಲ ದಿನ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 252ಕ್ಕೆ ಆಲೌಟ್ ಆದರೆ, ಇದಕ್ಕುತ್ತರವಾಗಿ ಶ್ರೀಲಂಕಾ ತಂಡ ಕೇವಲ 109ರನ್ಗಳಿಗೆ ಸರ್ವಪತನಗೊಂಡಿತ್ತು. ಇನ್ನು 143 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 303 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಮೊದಲ ವಿಕೆಟ್ಗೆ 42 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಮಯಾಂಕ್ ಅಗರ್ವಾಲ್(22) ವಿಕೆಟ್ ಕಳೆದುಕೊಂಡಿತು. ನಂತರ ಬಂದ ವಿಹಾರಿ 2ನೇ ವಿಕೆಟ್ಗೆ ರೋಹಿತ್ ಶರ್ಮಾ(46) ಜೊತೆಗೆ 56 ರನ್ ಸೇರಿಸಿದರು. 79 ಎಸೆತಗಳನ್ನು ಎದುರಿಸಿದ ರೋಹಿತ್ 46 ರನ್ಗಳಿಸಿ ಧನಂಜಯ ಡಿ ಸಿಲ್ವಾಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 35 ರನ್ಗಳಿಸಿದ್ದ ವಿಹಾರಿ ಮತ್ತು 13 ರನ್ಗಳಿಸಿದ್ದ ಕೊಹ್ಲಿ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಬೌಲಿಂಗ್ನಲ್ಲಿ ಔಟಾಗುವ ಮೂಲಕ ಬೆಂಗಳೂರಿನ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆ ಮೂಡಿಸಿದರು.