ಚೆನ್ನೈ:ಪ್ರಸ್ತುತ ಕ್ರಿಕೆಟ್ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿಗೆ ಅಪರಿಮಿತ ಅಭಿಮಾನಿ ಬಳಗವಿದೆ. ಚೇಸ್ ಮಾಸ್ಟರ್ ಅಂದ್ರೆ ಹಿರಿ- ಕಿರಿಯರೆಲ್ಲರಿಗೂ ಇಷ್ಟವೇ. ತಮಿಳುನಾಡಿನ ವಿಶೇಷಚೇತನ ಅಭಿಮಾನಿಯೊಬ್ಬ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದು, ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್ 5) ಭೇಟಿಯಾಗಿ, 'ಕನಸು ನನಸಾಯಿತು' ಎಂದು ಉದ್ಗರಿಸಿದ್ದಾರೆ.
ಚೆನ್ನೈನ ವೆಲಚೇರಿ ಮೂಲದ 19 ವರ್ಷದ ಶ್ರೀನಿವಾಸ್ ವಿಶೇಷಚೇತನರಾಗಿದ್ದಾರೆ. ಕಾಲಿನ ಊನತೆ ಹೊಂದಿರುವ ಶ್ರೀನಿವಾಸ್ಗೆ ಚಿತ್ರಕಲೆ ಒಲಿದಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿದ್ದು, ಇದನ್ನೇ ಬಳಸಿಕೊಂಡ ಅಭಿಮಾನಿ ಕೊಹ್ಲಿಯನ್ನು ಕಂಡು ಫೋಟೋ ತೆಗೆಸಿಕೊಂಡಿದ್ದಾರೆ. ಅವರೇ ಬಿಡಿಸಿದ ಕೊಹ್ಲಿಯ ಫೋಟೋಗೆ ಹಸ್ತಾಕ್ಷರ ಹಾಕಿಸಿಕೊಂಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಶ್ರೀನಿವಾಸ್, "ನಾನು 12 ನೇ ವಯಸ್ಸಿನಿಂದಲೂ ಕ್ರಿಕೆಟ್ ನೋಡುತ್ತಿದ್ದೇನೆ. ನನಗೆ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಇದೆ. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಯನ್ನು ನೋಡಲು ಎರಡು ವರ್ಷಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ಅಂತಿಮವಾಗಿ ಇಂದು ನಾನು ಇಷ್ಟ ಪಡುವ ಆಟಗಾರನನ್ನು ಭೇಟಿಯಾದೆ. ಕನಸು ನನಸಾದ ಸಂಭ್ರಮವಿದೆ. ಕರ್ನಾಟಕದ ಬೆಂಗಳೂರಿಗೆ ಕೊಹ್ಲಿಯನ್ನು ಭೇಟಿಯಾಗಲು ಹೋಗಿದ್ದೆ. ಆದರೆ, ಅವಕಾಶ ಸಿಕ್ಕಿರಲಿಲ್ಲ. ಇಂದು ಅನಿರೀಕ್ಷಿತವಾಗಿ ಇಂಥದ್ದೊಂದು ಸೌಭಾಗ್ಯ ಸಿಕ್ಕಿತು" ಎಂದು ಹರ್ಷ ವ್ಯಕ್ತಪಡಿಸಿದರು.