ಹೈದರಾಬಾದ್:ಭಾರತದೊಂದಿಗೆ ಕಿರಿಕ್ ಮಾಡುತ್ತಲೇ ಇರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರದ ಬಿಗಿ ಕ್ರಮಗಳು ಬಿಸಿ ಮುಟ್ಟಿಸಿವೆ. ಅದು ಕ್ರೀಡೆಗೂ ತಟ್ಟಿದೆ. ವಿಶ್ವಕಪ್ನ ಆಡಲು ಭಾರತಕ್ಕೆ ಬಂದಿರುವ ತಂಡ ಸೋಲು ಗೆಲುವು ಕಾಣುತ್ತಿದ್ದರೆ, ಅದನ್ನು ಚಿಯರ್ ಮಾಡಲು ಅಭಿಮಾನಿಗಳೇ ಇಲ್ಲವಾಗಿದ್ದಾರೆ. ಜೊತೆಗೆ ತಮ್ಮ ಪತ್ರಕರ್ತರು ವರದಿ ಮಾಡಲು ಭಾರತಕ್ಕೆ ಬರಲು ಸರ್ಕಾರ ಬಿಡುತ್ತಿಲ್ಲ. ಅಭಿಮಾನಿಗಳನ್ನೂ ಇದೇ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಮಂಗಳವಾರ ದೂರು ನೀಡಿದೆ.
ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಅನ್ನು ವರದಿ ಮಾಡಲು ಪಾಕಿಸ್ತಾನಿ ಜರ್ನಲಿಸ್ಟ್ಗಳಿಗೆ ವೀಸಾ ವಿಳಂಬ ಮಾಡಲಾಗುತ್ತಿದೆ. ಅಭಿಮಾನಿಗಳಿಗೂ ಬರಲು ಅವಕಾಶ ನೀಡಲಾಗುತ್ತಿಲ್ಲ. ಜೊತೆಗೆ ವಿಶ್ವಕಪ್ನಲ್ಲಿ ತಂಡವನ್ನು ಗುರಿ ಮಾಡಲಾಗಿದೆ ಎಂದು ಆರೋಪಿಸಿ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಔಪಚಾರಿಕ ಪ್ರತಿಭಟನೆ ಸಲ್ಲಿಸಿದೆ.
ಪಾಕಿಸ್ತಾನ ಪ್ರತಿಭಟನೆ:ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಇಬ್ಬರು ಪಾಕಿಸ್ತಾನಿ ಕ್ರೀಡಾ ಪತ್ರಕರ್ತರು ಮಾತ್ರ ಹಾಜರಿದ್ದರು. 1.32 ಲಕ್ಷ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಪಾಕಿಸ್ತಾನಿ ಅಭಿಮಾನಿಗಳು ಯಾರೂ ಇರಲಿಲ್ಲ. ಇಲ್ಲಿನ ಸರ್ಕಾರ ತನ್ನ ಅಭಿಮಾನಿಗಳಿಗೆ ವೀಸಾ ಮಂಜೂರು ಮಾಡುತ್ತಿಲ್ಲ ಎಂದು ವೀಸಾ ರಹಿತ ನೀತಿಯ ವಿರುದ್ಧ ಪ್ರತಿಭಟನಾತ್ಮಕ ದೂರು ನೀಡಿದೆ.