ಕರಾಚಿ (ಪಾಕಿಸ್ತಾನ): ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ರಾಷ್ಟ್ರಗಳು ನಿಗದಿಯಾಗಿದ್ದರೂ ಗೊಂದಲಗಳು ಮುಗಿದಿಲ್ಲ. ವಿಶ್ವ ಕಪ್ ಪಂದ್ಯಗಳಿಗೆ ವರ್ಷಕ್ಕೂ ಮೊದಲೇ ವೇಳಾಪಟ್ಟಿ ಬಿಡುಗಡೆ ಮಾಡಬೇಕಿದೆ. ಆದರೂ ಐಸಿಸಿ ಕ್ರೀಡಾಂಗಣ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಅಕ್ಟೋಬರ್ 5 ರಿಂದ ಪಂದ್ಯಗಳು ಆರಂಭವಾಗುತ್ತವೆ ಎಂದು ವರದಿಯಾಗಿದೆ. ಆದರೆ, ವೇಳಾಪಟ್ಟಿಗಾಗಿ ಇನ್ನೂ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿಶ್ವಕಪ್ನ ತನ್ನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಯೋಜಿಸುವಂತೆ ಬೇಡಿಕೆ ಇಟ್ಟಿದೆ ಎಂದು ವರದಿಗಳು ಬಂದಿವೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಮ್ ಸೇಥಿ ಪ್ರತಿಕ್ರಿಯೆ ನೀಡಿದ್ದಾರೆ. ಐಸಿಸಿ ಪುರುಷರ ವಿಶ್ವಕಪ್ 2023ರ ಸಮಯದಲ್ಲಿ ಪಾಕಿಸ್ತಾನವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುವ ಕಲ್ಪನೆಯನ್ನು ಯಾವುದೇ ಹಂತದಲ್ಲೂ ಯಾವುದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿಲ್ಲ ಎಂದು ಖಚಿತಪಡಿಸಿದ್ದಾರೆ.
ಭಾರತವು ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಕ್ರಿಕೆಟ್ ವಿಶ್ವಕಪ್ನ ಆತಿಥ್ಯ ವಹಿಸಲಿದ್ದು, ಪಾಕಿಸ್ತಾನವು 2023 ರ ಏಷ್ಯಾ ಕಪ್ನ್ನು ಆಯೋಜಿಸಲಿದೆ. ಕೆಲವು ಮಾಧ್ಯಮ ವರದಿಗಳು ಹೈಬ್ರಿಡ್ ಮಾದರಿಯ ಪಂದ್ಯಕ್ಕೆ ಪಾಕಿಸ್ತಾನ ಮನವಿ ಮಾಡಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಐಸಿಸಿ ಪ್ರತಿಕ್ರಿಯೆ ನೀಡಿ, ಈ ರೀತಿಯ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ತಿಳಿಸಿದೆ.