ಇಸ್ಲಾಮಾಬಾದ್(ಪಾಕಿಸ್ತಾನ):ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಬಂಧ ಹಳಸಿದ್ದು, ಐಸಿಸಿ ಟೂರ್ನಿಗಳು ಮತ್ತು ಏಷ್ಯಾ ಕಪ್ನಲ್ಲಿ ಮಾತ್ರ ಉಭಯ ತಂಡಗಳು ಎದುರಾಗುತ್ತಿವೆ. ಮುಂದಿನ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ಅಲ್ಲಿಗೆ ತೆರಳಲ್ಲ ಎಂದಿದೆ. ಇದಕ್ಕೆ ಕುದ್ದು ಹೋಗಿರುವ ಪಾಕಿಸ್ತಾನ 2023 ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸಲ್ಲ ಎಂದು ಹೇಳಿಕೆ ನೀಡಿದೆ.
ಇದೇ ವಿಷಯವಾಗಿ ಹೇಳಿಕೆ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್‌ನಿಂದ ಭಾರತ ಹೊರಗುಳಿಯಲು ನಿರ್ಧರಿಸಿದರೆ, ಅಲ್ಲಿ ನಡೆಯುವ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
2021 ರ ಟಿ 20 ವಿಶ್ವಕಪ್ ಮತ್ತು ಏಷ್ಯಾಕಪ್ನಲ್ಲಿ ಭಾರತದ ವಿರುದ್ಧದ ಗೆಲುವನ್ನು ಉಲ್ಲೇಖಿಸಿರುವ ರಮೀಜ್ ರಾಜಾ, ಕೋಟ್ಯಧಿಪತಿ ಸಂಸ್ಥೆಯ ನೇತೃತ್ವದ ತಂಡವನ್ನು ಪಾಕಿಸ್ತಾನ ಸೋಲಿಸಿದೆ. ಇನ್ನು ಮುಂದಿನ ಪಂದ್ಯಗಳಲ್ಲಿ ಇದನ್ನೇ ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.