ಮೆಲ್ಬೋರ್ನ್ (ಆಸ್ಟ್ರೇಲಿಯಾ):ಆಸ್ಟ್ರೇಲಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಆಡುವುದಿಲ್ಲವೆಂದು ಟ್ವೀಟ್ ಮಾಡಿದ್ದಾರೆ. ಮುಂದಿನ 12 ತಿಂಗಳು ಅಂತಾರಾಷ್ಟ್ರೀಯ ವೇಳಾಪಟ್ಟಿಯು ಹೆಚ್ಚು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಂದ ಕೂಡಿದ್ದು, ಆಶಸ್ ಸರಣಿ ಮತ್ತು ವಿಶ್ವಕಪ್‌ಗೆ ಮುಂಚಿತವಾಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಕೆಕೆಆರ್ ಆಟಗಾರರಿಗೆ ಮತ್ತು ತಂಡದ ಸಿಬ್ಬಂದಿಗೆ ಧನ್ಯವಾದ ಹೇಳುವ ಮೂಲಕ ಟ್ವೀಟ್ ಮಾಡಿದ್ದಾರೆ. ಮತ್ತು ಆದಷ್ಟು ಬೇಗ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ಮುಂದಿನ ವರ್ಷ ಜೂನ್‌ನಲ್ಲಿ ಪ್ರಾರಂಭವಾಗುವ ಆಶಸ್ ಸರಣಿಯಲ್ಲಿ ಕಮ್ಮಿನ್ಸ್ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಂಡ ಜಯಗಳಿಸಲು ಉತ್ತಮ ಅವಕಾಶವಿದೆ. ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದ್ದು, ಇದರ ಜವಾಬ್ದಾರಿ ಹೆಚ್ಚಾಗಿರುವ ಹಿನ್ನೆಲೆ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧಾರವನ್ನು ಕೈಗೊಂಡಿದ್ದಾರೆ.