ಅಹಮದಾಬಾದ್ (ಗುಜರಾತ್): ದೀರ್ಘಕಾಲದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ಯಾಟ್ ಕಮಿನ್ಸ್ ಅವರ ತಾಯಿ ಮಾರಿಯಾ ಕಮಿನ್ಸ್ ಗುರುವಾರ ರಾತ್ರಿ ಸಿಡ್ನಿಯಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಅಹಮದಾಬಾದ್‌ನಲ್ಲಿ ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಮಿನ್ಸ್ ತಾಯಿ ನಿಧನದ ಗೌರವಾರ್ಥವಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತೋಳಿಗೆ ಕಪ್ಪು ಪಟ್ಟಿ ಧರಿಸಿ ಇಂದು ಕಣಕ್ಕಳಿದಿದೆ.
"ರಾತ್ರೋರಾತ್ರಿ ಮಾರಿಯಾ ಕಮ್ಮಿನ್ಸ್ ಅವರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಆಸ್ಟ್ರೇಲಿಯನ್ ಕ್ರಿಕೆಟ್ ಪರವಾಗಿ, ಪ್ಯಾಟ್ ಕಮಿನ್ಸ್, ಕಮಿನ್ಸ್ ಕುಟುಂಬ ಮತ್ತು ಅವರ ಸ್ನೇಹಿತರಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಆಸ್ಟ್ರೇಲಿಯನ್ ಪುರುಷರ ತಂಡವು ಇಂದು ಗೌರವಾರ್ಥವಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಲಿದೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಐಸಿಸಿ ಟ್ವಿಟ್ ಮಾಡಿ ಕಮಿನ್ಸ್ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಟ್ವಿಟ್ನಲ್ಲಿ "ಪ್ಯಾಟ್ ಕಮ್ಮಿನ್ಸ್ ಅವರ ತಾಯಿ ಮಾರಿಯಾ ಅವರ ನಿಧನಕ್ಕೆ ಪ್ಯಾಟ್ ಮತ್ತು ಅವರ ಕುಟುಂಬಕ್ಕೆ ಸಂತಾಪ" ಎಂದು ಬರೆದುಕೊಂಡಿದೆ.
ಎರಡನೇ ಟೆಸ್ಟ್ ನಂತರ ಆಸಿಸ್ಗೆ ಮರಳಿದ್ದ ಕಮಿನ್ಸ್:ಬಾರ್ಡರ್ - ಗವಾಸ್ಕರ್ ಸರಣಿಯ ಎರಡನೇ ಮತ್ತು ಮೂರನೇ ಟೆಸ್ಟ್ ನಡುವೆ 9 ದಿನಗಳ ಅಂತರ ಇತ್ತು. ಈ ವೇಳೆ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ತಾಯಿಯ ಅನಾರೋಗ್ಯದ ಹಿನ್ನೆಲೆ ತವರಿಗೆ ಮರಳಿದ್ದರು. ಎರಡು ಟೆಸ್ಟ್ ನಡುವೆ ಬಿಡುವಿದ್ದ ಕಾರಣ ಇಂದೋರ್ನ ಟೆಸ್ಟ್ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಮಿನ್ಸ್ ತಾಯಿಯ ಅನಾರೋಗ್ಯ ಬಿಗಡಾಯಿಸಿದ ಕಾರಣ ಮೂರನೇ ಟೆಸ್ಟ್ನಿಂದ ಹೊರಗುಳಿದಿದ್ದರು.