ನವದೆಹಲಿ:ಆ್ಯಶಸ್ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಿನ್ನೆ (ಮಂಗಳವಾರ) ಆತಿಥೇಯ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಆಸೀಸ್ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಉಸ್ಮಾನ್ ಖವಾಜಾ ತಂಡದ ಗೆಲುವಿನ ಹೀರೋಗಳಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ, ಪ್ಯಾಟ್ ಕಮಿನ್ಸ್ ಆಟಕ್ಕೆ ಭಾರತದ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮನಸೋತಿದ್ದು, ಅವರನ್ನು ಟೆಸ್ಟ್ ಕ್ರಿಕೆಟ್‌ನ 'ಹೊಸ ಮಿಸ್ಟರ್ ಕೂಲ್' ಎಂದು ಬಣ್ಣಿಸಿದ್ದಾರೆ.
ಇಂಗ್ಲೆಂಡ್ನ ಎಡ್ಜ್‌ಬಾಸ್ಟನ್‌ನಲ್ಲಿ ಮಂಗಳವಾರ ಮೊದಲ ಟೆಸ್ಟ್‌ನ ಕೊನೆಯ ದಿನ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳ ರೋಚಕ ಜಯದೊಂದಿಗೆ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯಿತು. ಮೊದಲ ಇನ್ನಿಂಗ್ಸ್ನಲ್ಲಿ 393/8 ರನ್ಗಳಿಗೆ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತ್ತು. ಆಸ್ಟ್ರೇಲಿಯಾ 386 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿ ಕೇವಲ 7 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಯಾನ್ ತಲಾ ನಾಲ್ಕು ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು ಕೇವಲ 273 ರನ್ಗಳಿಗೆ ಕಟ್ಟಿ ಹಾಕಿದ್ದರು. ಇದರಿಂದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 273 ರನ್‌ಗಳ ಗೆಲುವಿನ ಗುರಿ ಪಡೆದಿತ್ತು.
ಆದರೆ, ಅಂತಿಮ ದಿನದಾಟ ಮಳೆಯಿಂದಾಗಿ ವಿಳಂಬವಾಯಿತು. 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡದ ಗೆಲುವಿಗೆ 174 ರನ್ ಅಗತ್ಯವಿತ್ತು. ಮಧ್ಯಾಹ್ನ ತಡವಾಗಿ ಆರಂಭವಾದ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿ ಆಂಗ್ಲ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದರು. ಕೊನೆಯ ಸೆಷನ್ನಲ್ಲಿ ಆಸ್ಟ್ರೇಲಿಯಾಕ್ಕೆ 3 ವಿಕೆಟ್‌ಗಳಿಂದ 73 ರನ್ ಗಳಿಸಬೇಕಾಗಿತ್ತು. ಇದರಿಂದ ಕಾಂಗಾರು ಪಡೆ ಸೋಲುತ್ತದೆ ಎಂದೇ ಬಹುತೇಕರು ಭಾವಿಸಿದ್ದರು. ಆದರೆ, ಪ್ಯಾಟ್ ಕಮಿನ್ಸ್ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. 9ನೇ ವಿಕೆಟ್‌ಗೆ ನಾಥನ್ ಲಯಾನ್ ಜೊತೆಗೂಡಿ ಕಮಿನ್ಸ್ 72 ಎಸೆತಗಳಲ್ಲಿ 55 ರನ್‌ಗಳ ಕೊಡುಗೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಮಿನ್ಸ್ 44 ರನ್ ಬಾರಿಸಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ನಾಥನ್ 16 ರನ್ ಕಲೆ ಹಾಕಿದರು.