ದುಬೈ: 2023ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಪ್ಯಾಟ್ ಕಮಿನ್ಸ್ ಐಪಿಎಲ್ ಇತಿಹಾಸದಲ್ಲಿ ದಾಖಲೆಗೆ ಬಿಕರಿ ಆದ ಆಟಗಾರರಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ನಡುವೆ ನಡೆದ ಪೈಪೋಟಿಯಲ್ಲಿ 20.50 ಕೋಟಿಗೆ ಬಿಕರಿಯಾದರು. 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮಿನಿ ಹರಾಜು ದುಬೈನ ಕೋಲಾ ಅರೆನಾದಲ್ಲಿ ನಡೆಯುತ್ತಿದೆ.
2 ಕೋಟಿ ಮೂಲ ಬೆಲೆಯೊಂದಿಗೆ ಕಮ್ಮಿನ್ಸ್ ಬಿಡ್ಡಿಂಗ್ ವಾರ್ಗೆ ಮುಂಬೈ ಇಂಡಿಯನ್ಸ್ (ಎಂಐ) ಇಳಿಯಿತು. ನಂತರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ಏರ್ಪಟ್ಟಿತು. ಮುಂಬೈ ಹಿಂದೆ ಸರಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯಿತು. ಆದರೆ ಆರ್ಸಿಬಿಯ ಜೊತೆ ದೊಡ್ಡ ಹೋರಾಟ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್. ಆರ್ಸಿಬಿ ಕೈಯಲ್ಲಿ 23 ಕೋಟಿ ಇದ್ದರೆ, ಹೈದರಾಬಾದ್ ಬಳಿ 25 ಕೋಟಿ ಇತ್ತು.
ಹಣದ ಮಿತಿಯ ಅರಿವಿದ್ದರೂ ಉಭಯ ತಂಡಗಳು 'ನೀ ಕೊಡೆ ನಾ ಬಿಡೆ' ಎಂಬಂತೆ ಬಿಡ್ ಮಾಡಲು ಆರಂಭಿಸಿದರು. 10 ಕೋಟಿ ದಾಟಿ 20 ಕೋಟಿಗೆ ತಲುಪಿತು. ತಂಡಗಳ ಬಳಿ ಇದ್ದ ಒಟ್ಟು ಮೊತ್ತದ ಹತ್ತಿರ ಬಿಡ್ ಮೊತ್ತ ಬಂದರೂ ಇಬ್ಬರೂ ಸತತ ಪೈಪೋಟಿ ನಡೆಸಿದರು. ಬಿಡ್ಡಿಂಗ್ 20ಕೋಟಿ ದಾಟುತ್ತಿದ್ದಂತೆ ಉಳಿದ ತಂಡಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 20.50 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿತು.