ಮುಂಬೈ :ಸಂಗೀತ ಲೋಕದ ಧೃವತಾರೆ ಲತಾ ಮಂಗೇಶ್ಕರ್ ಅವರ ನನ್ನ ಜೀವನದಲ್ಲಿ ಮಹತ್ತರವಾದ ಒಂದು ಭಾಗ. ಅವರು ನನಗೆ ಸಿಕ್ಕಿದ್ದ ಅದೃಷ್ಟ. ಇಂದು ಅವರ ಅಗಲಿಕೆ ನನಗೆ ನನ್ನ ಜೀವನದ ಒಂದು ಭಾಗವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಕ್ರಿಕೆಟ್‌ನ ಗಾಡ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾನುವಾರ ಗಾನ ಕೋಗಿಲೆ ಲತಾ ಮಂಗೇಶ್ಕರ್ ತಮ್ಮ 92ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರು. ತಮ್ಮನ್ನು ಸ್ವಂತ ಮಗನಂತೆ ಕಾಣುತ್ತಿದ್ದ ಲತಾ ಅವರ ಕೊನೆಯುಸಿರೆಳೆದ ಸಂದರ್ಭದಲ್ಲಿ ಸಚಿನ್ ಆಸ್ಪತ್ರೆಗೆ ಧಾವಿಸಿದ್ದರು.
"ಲತಾ ದೀದಿಯವರ ಜೀವನದ ಭಾಗವಾಗಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ. ಅವರು ಸದಾ ತನ್ನ ಪ್ರೀತಿ ಮತ್ತು ಆಶೀರ್ವಾದವನ್ನು ನನಗೆ ಧಾರೆ ಎರೆದಿದ್ದಾರೆ. ಅವರ ನಿಧನದಿಂದ ನನ್ನ ಜೀವನದ ಒಂದು ಭಾಗವೂ ಕಳೆದುಕೊಂಡಂತಾಗಿದೆ. ಆದರೆ, ಅವರು ಯಾವಾಗಲೂ ತಮ್ಮ ಸಂಗೀತದ ಮೂಲಕ ನಮ್ಮ ಹೃದಯದಲ್ಲಿ ಬದುಕಿರುತ್ತಾರೆ" ಎಂದು ತೆಂಡೂಲ್ಕರ್ ಟ್ವೀಟ್ ಮೂಲಕ ಹೃದಯಸ್ಪರ್ಶಿ ಸಂತಾಪ ಸೂಚಿಸಿದ್ದಾರೆ.
ಸ್ವತಃ ಕ್ರಿಕೆಟ್‌ನ ಕಟ್ಟಾ ಅಭಿಮಾನಿಯಾಗಿದ್ದ ಲತಾ ಮಂಗೇಶ್ಕರ್ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಮಗ ಎಂದೇ ಭಾವಿಸಿದ್ದರು. ಸಚಿನ್ ಕೂಡ ಲತಾ ಅವರನ್ನು ಅಮ್ಮಾ ಎಂದೇ ಕರೆಯುತ್ತಿದ್ದರೆಂದು ಸ್ವತಃ ಲೆಜೆಂಡರಿ ಸಿಂಗರ್ ಸಾಕಷ್ಟು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ:ಲತಾ ಮಂಗೇಶ್ಕರ್ ಅಪ್ರತಿಮ ಕ್ರಿಕೆಟ್ ಪ್ರೇಮಿ, 2011ರ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಗೆಲುವಿಗಾಗಿ ಉಪವಾಸ ಮಾಡಿದ್ರು