ನವದೆಹಲಿ: ಭಾರತದಲ್ಲಿ ಎರಡನೇ ಹಂತದ ಕೊರೊನಾ ವ್ಯಾಪಕವಾಗಿದೆ. ನಿತ್ಯ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವಿರಾರು ಮಂದಿ ಆಕ್ಸಿಜನ್ ಕೊರತೆಯಿಂದಲೇ ಸಾವೀಗೀಡಾಗುತ್ತಿದ್ದಾರೆ. ಈ ಕಾರಣದಿಂದ ಸಿನಿಮಾ ನಟರು, ದೇಶ ವಿದೇಶದ ಕ್ರಿಕೆಟಿಗರು ಭಾರತದ ಜನತೆಯ ನೆರವಿಗೆ ತಮ್ಮ ಕೈಲಾದಂತಹ ನೆರವು ಘೋಷಿಸುತ್ತಿದ್ದಾರೆ. ಈ ಅಭಿಯಾನಕ್ಕೆ ಭಾರತ ತಂಡದ ಕ್ರಿಕೆಟಿಗರಾದ ಪಾಂಡ್ಯ ಸಹೋದರರು ಕೂಡ ಕೈಜೋಡಿಸಿದ್ದಾರೆ.
ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬದ ಪರವಾಗಿ 200 ಆಕ್ಸಿಜನ್ ಕಾನ್ಸೆಂಟ್ರೇಟರ್ಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
"ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ದೇಶವು ಅನುಭವಿಸುತ್ತಿರುವ ಕಷ್ಟವನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಇಂತಹ ಕಷ್ಟದ ಸಂದರ್ಭದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳು, ಮುಂಚೂಣಿ ಕಾರ್ಮಿಕರಿಗೆ ಕೃತಜ್ಞತೆಗಳನ್ನು ಅರ್ಪಿಸಬೇಕು" ಎಂದು ಪಾಂಡ್ಯ ಹೇಳಿದ್ದಾರೆ.