ಇಸ್ಲಾಮಾಬಾದ್:ಮಹಾಮಾರಿ ಕೊರೊನಾ ವೈರಸ್ ಹಾವಳಿಗೆ ಭಾರತ ನಲುಗಿ ಹೋಗಿದ್ದು, ಬೆಡ್, ಔಷಧಿ ಜೊತೆಗೆ ಆಕ್ಸಿಜನ್ ಸಮಸ್ಯೆಯಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಭಾರತದಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆ ವಿಚಾರವಾಗಿ ಇದೀಗ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮನವಿ ಮಾಡಿಕೊಂಡಿದ್ದಾರೆ. ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಎದುರಿಸುತ್ತಿರುವ ಭಾರತಕ್ಕೆ ನೆರವಾಗುವಂತೆ ಪಾಕ್ ಸರ್ಕಾರ ಹಾಗೂ ಅಭಿಮಾನಿಗಳ ಬಳಿ ಅಖ್ತರ್ ಮನವಿ ಮಾಡಿದ್ದಾರೆ.
ಟ್ವೀಟ್ ಮಾಡಿ ವಿಡಿಯೋ ಹರಿಬಿಟ್ಟ ಅಖ್ತರ್!
ಮಹಾಮಾರಿ ಕೊರೊನಾದಿಂದ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸುವುದು ಸರ್ಕಾರಕ್ಕೆ ಕಷ್ಟಕರವಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಹಾಯ ಮಾಡುವಂತೆ ನನ್ನ ಸರ್ಕಾರ ಹಾಗೂ ಅಭಿಮಾನಿಗಳಲ್ಲಿ ವಿನಂತಿ ಮಾಡುತ್ತೇನೆ ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಹೇರಳವಾಗಿ ಆಮ್ಲಜನಕ ಸಿಲಿಂಡರ್ಗಳ ಅಗತ್ಯವಿದೆ. ಈ ವಿಷಯದಲ್ಲಿ ಭಾರತಕ್ಕೆ ಆಮ್ಲಜನಕ ಪೊರೈಕೆ ಮಾಡುವಂತೆ ಪ್ರತಿಯೊಬ್ಬರೂ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಮಹಾಮಾರಿ ಕೊರೊನಾ ವಿರುದ್ಧ ಭಾರತ ಹೋರಾಟ ನಡೆಸಿದ್ದು, ಇಂತಹ ಸ್ಥಿತಿಯಲ್ಲಿ ಎಲ್ಲರ ಬೆಂಬಲ ಅಗತ್ಯವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದಿದ್ದಾರೆ.