ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶಾಹೀನ್ ಅಫ್ರಿದಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಮಾಜಿ ಹಿರಿಯ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪುತ್ರಿ ಅನ್ಶಾ ಜೊತೆ ವಿವಾಹವಾಗಿದ್ದಾರೆ. ಶಾಹೀನ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಅವರ ಅಭಿಮಾನಿಗಳು ಕಮೆಂಟ್ ಮೂಲಕ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.
ಶಾಹೀನ್ ಕುಟುಂಬ ಮದುವೆಗಾಗಿ ಎರಡು ದಿನಗಳ ಮುಂಚಿತವಾಗಿ ಕರಾಚಿಗೆ ತಲುಪಿದ್ದರು. ಈ ಜೋಡಿಯ ಮೆಹಂದಿ ಕಾರ್ಯಕ್ರಮವು ಗುರುವಾರ ರಾತ್ರಿ ನಡೆಯಿತು. ನಿನ್ನೆ ವಿವಾಹ ನೆರವೇರಿದ್ದು, ಬಳಿಕ ಆರತಕ್ಷತೆ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಸರ್ಫರಾಜ್ ಅಹ್ಮದ್, ನಜೀಮ್ ಶಾ, ಶದಾಬ್ ಖಾನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದಾಂಪತ್ಯಕ್ಕೆ ಕಾಲಿರಿಸಿದ ಶಾಹೀನ್- ಅನ್ಶಾ ಜೋಡಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಶಾಹೀನ್ ಅಫ್ರಿದಿ ವೇಗದ ಬೌಲಿಂಗ್ನಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆದರೆ ಕೆಲವು ದಿನಗಳಿಂದ ಅವರ ಮದುವೆ ವಿಷಯವೇ ಹೆಚ್ಚು ಟ್ರೆಂಡಿಯಾಗಿದೆ. ಕೊನೆಗೂ ಶಾಹೀನ್ ಮತ್ತು ಅನ್ಶಾ ಫೆಬ್ರವರಿ 3, ಶುಕ್ರವಾರದಂದು ಕರಾಚಿಯಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದು, ಈ ಚರ್ಚೆಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಮುಸ್ಲಿಂ ಅಚರಣೆಗಳನ್ನು ಪರಸ್ಪರ ಒಪ್ಪಿ ಅವರ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಜೋಡಿ ಕಳೆದ 2 ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಅವರ ನಿಕ್ಕಾಹ್(ಮದುವೆ) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಕಂಡ ನೆಟ್ಟಿಗರಂತು ಫುಲ್ ಖುಷ್ ಆಗಿದ್ದಾರೆ.