ಕರ್ನಾಟಕ

karnataka

ETV Bharat / sports

World cup: ಬರಲ್ಲ ಎನ್ನುವ ಪಾಕಿಸ್ತಾನ ಈ ಮೂರು ಕಾರಣಗಳಿಗಾಗಿ ಭಾರತಕ್ಕೆ ವಿಶ್ವಕಪ್​ ಆಡಲು ಬರಲೇಬೇಕು! - ಐಸಿಸಿ

ಭಾರತದಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಭಾಗಿಯಾಗಲ್ಲ ಎಂಬ ಪಾಕಿಸ್ತಾನದ ಬೆದರಿಕೆ ಮಾತುಗಳು ವರ್ಕೌಟ್​ ಆಗಲ್ಲ ಎಂಬುದು ಸರ್ವವಿಧಿತ. ಅದರ ಈ ನಿರ್ಧಾರದಿಂದ ತಂಡಕ್ಕೆ ದೊಡ್ಡ ಆರ್ಥಿಕ ಪೆಟ್ಟು ಬೀಳಲಿದೆ.

ವಿಶ್ವಕಪ್
ವಿಶ್ವಕಪ್

By

Published : Jul 11, 2023, 5:42 PM IST

ನವದೆಹಲಿ:ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್​ ಹಗ್ಗಜಗ್ಗಾಟ ಮುಂದುವರಿದಿದೆ. ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್​ನಲ್ಲಿ ಭಾರತ ಭಾಗವಹಿಸಲಿಲ್ಲ ಎಂದು ಭಾರತ ಹೇಳಿದ್ದರೆ, ಭಾರತದಲ್ಲಿ ನಡೆಯುವ ವಿಶ್ವಕಪ್​ ಅನ್ನು ತಾನು ಗೈರಾಗುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಎರಡೂ ಕ್ರಿಕೆಟ್​ ಸಂಸ್ಥೆಗಳ ನಡುವಿನ ಮನಸ್ತಾಪ ಬಗೆಹರಿಸಲು ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ ಶತಪ್ರಯತ್ನ ನಡೆಸುತ್ತಿದೆ. ಈಗಾಗಲೇ ಪಾಕ್​ ಮಂಡಳಿ ಜೊತೆ ಅದರ ನಿಯೋಗ ಮಾತುಕತೆಯನ್ನೂ ನಡೆಸಿದೆ. ಆದಾಗ್ಯೂ ಯಾವುದೇ ನಿರ್ಣಯ ಹೊರಬಿದ್ದಿಲ್ಲ.

ಪಾಕಿಸ್ತಾನ ಮತ್ತು ಭಾರತದ ರಾಜಕೀಯ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್​ ಮೇಲೆ ಅದು ಪರಿಣಾಮ ಬೀರಿದೆ. ಭದ್ರತೆ ಕಾರಣಕ್ಕಾಗಿ ಟೀಂ ಇಂಡಿಯಾ ಪಾಕ್​ಗೆ ತೆರಳಲು ಹಿಂದೇಟು ಹಾಕುತ್ತಿದೆ. ಹೀಗಿರುವಾಗ ಪಾಕಿಸ್ತಾನಕ್ಕೆ ಸೂಕ್ತ ಭದ್ರತೆ ನೀಡುವ ಆಶ್ವಾಸನೆ ನೀಡಿದಾಗ್ಯೂ ಅದು ಭಾರತಕ್ಕೆ ಬರಲು ತಗಾದೆ ತೆಗೆಯುತ್ತಿದೆ. ಇದು ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ.

ಪಾಕಿಸ್ತಾನ ಅದೆಷ್ಟೇ ವಿರೋಧ ವ್ಯಕ್ತಪಡಿಸಿದರೂ ಭಾರತದಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಭಾಗವಹಿಸಲು ಒಪ್ಪಲೇಬೇಕು. ಇಲ್ಲವಾದಲ್ಲಿ ಭಾರಿ ನಷ್ಟ ಅನುಭವಿಸುವುದು ಮಾತ್ರ ಖಂಡಿತ. ಈ ಪ್ರಜ್ಞೆ ಪಾಕ್​ ಮಂಡಳಿಗಿದ್ದರೂ ಹಠಕ್ಕೆ ಬಿದ್ದಂತೆ ಅದು ವರ್ತಿಸುತ್ತಿದೆ. ಹೀಗಾಗಿ ಪಾಕಿಸ್ತಾನದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ.

ಐಸಿಸಿ ನಿಧಿ ಕಟ್​:ಒಂದು ವೇಳೆ ಐಸಿಸಿ ವಿಶ್ವಕಪ್​ನಲ್ಲಿ ಪಾಕ್​ ಭಾಗವಹಿಸದಿದ್ದರೆ, ಐಸಿಸಿಯಿಂದ ಬರುವ ನಿಧಿ ತಂಡದ ಕೈತಪ್ಪಲಿದೆ. ಐಸಿಸಿ ವಾರ್ಷಿಕವಾಗಿ ಕ್ರಿಕೆಟ್​ ಮಂಡಳಿಗಳಿಗೆ ಆದಾಯ ಹಂಚಿಕೆ ಮಾಡುತ್ತದೆ. ಅದರಲ್ಲಿ ಪಾಕಿಸ್ತಾನ ನಾಲ್ಕನೇ ಅಧಿಕ ಹಣ ಪಡೆಯುವ ದೇಶವಾಗಿದೆ. ಮುಂದಿನ 4 ವರ್ಷಗಳಲ್ಲಿ (2024-27) ಭಾರತಕ್ಕೆ ಅತ್ಯಧಿಕ 1,908.753 ಕೋಟಿ ರೂಪಾಯಿ (ಶೇ.38.50) ಆದಾಯ ಬರಲಿದೆ. ಪಾಕಿಸ್ತಾನಕ್ಕೆ 285 ಕೋಟಿ(ಶೇ.5.75) ಆದಾಯ ಸಿಗಲಿದೆ. ಹೀಗಾಗಿ ಐಸಿಸಿಯ ಈವೆಂಟ್​ಗಳಲ್ಲಿ ಅದು ಪಾಲ್ಗೊಳ್ಳಬೇಕು. ಹಾಗೊಂದು ವೇಳೆ ಭಾಗವಹಿಸದೇ ಇದ್ದಲ್ಲಿ ಬರುವ ಆದಾಯ ಖೋತಾ ಆಗುವುದು ಮಾತ್ರ ಖಂಡಿತ.

ನಿಷೇಧದ ಭೀತಿ:ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್‌ಗೆ ಪಾಕಿಸ್ತಾನ ಸರ್ಕಾರ ಕ್ರಿಕೆಟ್​ ತಂಡವನ್ನು ಕಳುಹಿಸದಿದ್ದರೆ, ಕೆಲವು ವರ್ಷಗಳವರೆಗೆ ಪಾಕ್​ ಟೀಂ ನಿಷೇಧಕ್ಕೆ ಒಳಗಾಗುವ ಭೀತಿ ಇದೆ. ಇದು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಗೂ ಗೊತ್ತಿದೆ. ನಿಷೇಧಕ್ಕೊಳಗಾದೆ ಮುಂದೆ ನಡೆಯುವ ಯಾವುದೇ ಐಸಿಸಿ ಸ್ಪರ್ಧೆಗಳಲ್ಲಿ ತಂಡ ಭಾಗಿಯಾಗುವಂತಿಲ್ಲ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೂ ಔಟ್​:ಮಿನಿ ವಿಶ್ವಕಪ್​ ಎಂದೇ ಹೇಳಲಾದ 2025 ರಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಿಂದಲೂ ತಂಡ ವಿಮುಖವಾಗಬೇಕಾಗುತ್ತದೆ. ವಿಶ್ವಕಪ್​ನಲ್ಲಿ ಭಾಗವಹಿಸದೇ ಹೋದಲ್ಲಿ ಐಸಿಸಿ ಮುಂದಿನ ತನ್ನೆಲ್ಲಾ ಈವೆಂಟ್​ಗಳಿಂದ ಪಾಕ್​ ತಂಡವನ್ನು ದೂರವಿಡಬಹುದು. ಇಷ್ಟೆಲ್ಲಾ ಅವಘಡಗಳಿಗೆ ಪಾಕ್ ಮಂಡಳಿ ಎಡೆಮಾಡಿಕೊಡುವುದಿಲ್ಲ ಎಂಬುದು ಕ್ರಿಕೆಟ್​​ ಬಲ್ಲವರ ಅಭಿಪ್ರಾಯ.

ಇದನ್ನೂ ಓದಿ:$15 ಬಿಲಿಯನ್ ತಲುಪಿದ IPL ವ್ಯಾಪಾರ ಉದ್ಯಮ ಮೌಲ್ಯ; CSK, RCB ಫ್ರಾಂಚೈಸಿಗಳಿಗೆ ಹಣದ ಹೊಳೆ

ABOUT THE AUTHOR

...view details